ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ: ಚೋರಗಸ್ತಿ

KannadaprabhaNewsNetwork |  
Published : Dec 25, 2023, 01:30 AM IST
ಫೋಟೋ- 24ಜಿಬಿ2 | Kannada Prabha

ಸಾರಾಂಶ

ಭೀಮಳ್ಳಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಪ್ರಗತಿಪರ ರೈತರಿಗೆ ಸತ್ಕಾರ.

ಕನ್ನಡಪ್ರಭ ವಾರ್ತೆ ಕಲಬುರಗಿ

ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು. ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ, ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ. ಸಾವಯುವ ಗೊಬ್ಬರದ ವ್ಯಾಪಕ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಶಿವಲಿಂಗಪ್ಪ ಚೋರಗಸ್ತಿ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಭೀಮಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ‘ಕನ್ನಡ ಜಾನಪದ ಪರಿಷತ್’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಜಂಟಿಯಾಗಿ ಏರ್ಪಡಿಸಿದ್ದ ‘ರಾಷ್ಟ್ರೀಯ ರೈತ ದಿನಾಚರಣೆ’ಯ ಪ್ರಯುಕ್ತ ಪ್ರಗತಿಪರ ರೈತರಿಗೆ ಸತ್ಕಾರ, ರೈತ ಗೀತಗಾಯನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಮಣ್ಣಿನ ಸವಕಳಿ ತಡೆಗಟ್ಟಿ. ಮಳೆ ನೀರಿನ ಕೊಯ್ಲು ಕಡ್ಡಾಯವಾಗಿ ಮಾಡಬೇಕು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ರೈತ ಗೀತೆಗಳನ್ನು ಹಾಡಿದರು. ಬಳಗದ ಅಧ್ಯಕ್ಷ ಎಚ್.ಬಿ. ಪಾಟೀಲ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿದರು.

ಪ್ರಗತಿಪರ ಶಿವಲಿಂಗಪ್ಪ ಚೋರಗಸ್ತಿ ಸೇರಿದಂತೆ ಮಹೇಶ ಪಾಟೀಲ, ಚಂದ್ರಶೇಖರ ಗಿರೆಪ್ಪಗೋಳ್, ವಿಠಲ ಚೋರಗಸ್ತಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು. ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಬಿರಾದಾರ, ಗ್ರಾ.ಪಂ. ಸದಸ್ಯ ಅಣವೀರಪ್ಪ ಚೋರಗಸ್ತಿ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ನಿಂಗಯ್ಯ ಮಠಪತಿ, ಮಡಿವಾಳಪ್ಪ ಪಾಟೀಲ, ಸಂಗಪ್ಪ ಚೋರಗಸ್ತಿ, ನೀಲಕಂಠ ನಾಟಿಕಾರ್, ಕರಬಸಪ್ಪ ಚೋರಗಸ್ತಿ, ಪ್ರಕಾಶ ಜಾಧವ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ