ಬೀದಿ ನಾಯಿ ಹಾವಳಿ ಕಡಿಮೆ ಮಾಡಲು ದತ್ತು ಯೋಜನೆ!

KannadaprabhaNewsNetwork |  
Published : Aug 19, 2025, 01:00 AM IST
44444 | Kannada Prabha

ಸಾರಾಂಶ

ಬೀದಿ ನಾಯಿಗಳ ಉಪಟಳದಿಂದ ಇಡೀ ದೇಶವೇ ತತ್ತರಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗುತ್ತಿದೆ

ಶಿವಾನಂದ ಗೊಂಬಿ ಹುಬ್ಬಳ್ಳಿ

ಬೀದಿ ನಾಯಿಗಳ ಹಾವಳಿ ಕಡಿಮೆ ಮಾಡಲು ಶೆಡ್‌ ನಿರ್ಮಿಸಿ ಎಂದು ದೆಹಲಿಯಲ್ಲಿ ಸುಪ್ರೀಂಕೋರ್ಟ್‌ ಖಡಕ್ಕಾಗಿ ವಾರ್ನಿಂಗ್‌ ಮಾಡುತ್ತಿದ್ದಂತೆ, ಇತ್ತ ಹುಬ್ಬಳ್ಳಿ- ಧಾರವಾಡದಲ್ಲಿನ ಬೀದಿ ನಾಯಿ ಹಾವಳಿ ಕಡಿಮೆ ಮಾಡಲು ದತ್ತು ಕೊಡುವ ಯೋಜನೆಯನ್ನು ಮಹಾನಗರ ಪಾಲಿಕೆ ಸಿದ್ಧಪಡಿಸಿದೆ. ದತ್ತು ಕೊಡಲು ಪಾಲಿಕೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಅಭಿಯಾನವನ್ನೇ ಆರಂಭಿಸಿದೆ.

ಬೀದಿ ನಾಯಿಗಳ ಉಪಟಳದಿಂದ ಇಡೀ ದೇಶವೇ ತತ್ತರಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಏರಿಯಾದಲ್ಲಿ ನಾಯಿ ಕಡಿತ ನಡೆಯುತ್ತಲೇ ಇರುತ್ತದೆ. ಕಳೆದ ವಾರವಷ್ಟೇ ಬಾಲಕಿಯೊಬ್ಬಳ ಮೇಲೆ ನಾಲ್ಕಾರು ಬೀದಿನಾಯಿಗಳು ದಾಳಿ ನಡೆಸಿದ್ದವು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಜತೆಗೆ ಸಾರ್ವಜನಿಕರೊಂದಿಗೂ ಸಭೆ ನಡೆಸಿತ್ತು. ಸಭೆಯಲ್ಲೂ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳು, ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ದತ್ತು ಕಾರ್ಯಕ್ರಮ: ಸಾರ್ವಜನಿಕ ಒತ್ತಡಕ್ಕೆ ಮಣಿದಿರುವ ಪಾಲಿಕೆಯೂ ಇದೀಗ ಬೀದಿ ನಾಯಿ ಮರಿಗಳನ್ನು ದತ್ತು ಕೊಡಲು ಯೋಚಿಸಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಏನಿಲ್ಲ ಎಂದರೂ ₹35 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ಪಾಲಿಕೆ ತಿಳಿಸುತ್ತವೆ. ಇವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಶಿವಳ್ಳಿಯಲ್ಲಿ ಶೆಡ್‌ ನಿರ್ಮಿಸಿದ್ದು, ಅಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರೊಂದಿಗೆ ಅನಾಥ ನಾಯಿಮರಿಗಳು ಮಹಾನಗರದಲ್ಲಿ ಸಾಕಷ್ಟಿವೆ. ಅವುಗಳನ್ನು ದತ್ತು ಕೊಡಬೇಕೆಂಬ ಆಲೋಚನೆ ಪಾಲಿಕೆಯದ್ದು. ಬೀದಿ ನಾಯಿಗಳು ಮರಿಗಳಿಗೆ ಜನ್ಮಕೊಟ್ಟು ಅವುಗಳನ್ನು ಬಿಟ್ಟು ಹೋಗಿರುತ್ತವೆ. ಅಥವಾ ಸತ್ತಿರುತ್ತವೆ. ಹೀಗಾಗಿ ಈ ನಾಯಿ ಮರಿಗಳು ಅನಾಥವಾಗಿರುತ್ತವೆ. ಅಂಥ ನಾಯಿಗಳನ್ನು ದತ್ತು ಕೊಟ್ಟರೆ ಸ್ವಲ್ಪ ಬೀದಿ ನಾಯಿಗಳ ಹಾವಳಿ ಕಡಿಮೆಯಾಗಬಹುದು ಆಲೋಚನೆ ಪಾಲಿಕೆಯದ್ದು.

ಏನಿದು ಅಭಿಯಾನ?: ಪಾಲಿಕೆಯ ಯೋಚನೆಗೆ ಏಳು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಆ. 24ರಂದು ತೋಳನಕೆರೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅಷ್ಟರೊಳಗೆ ಅನಾಥ ಬೀದಿ ನಾಯಿ ಮರಿಗಳನ್ನು ದತ್ತುಕೊಳ್ಳಲು ಇಚ್ಛಿಸುವವರು ನೋಂದಣಿ ಮಾಡಿಸಬಹುದು. ಅದಕ್ಕಾಗಿ ಕ್ಯೂಆರ್‌ ಕೋಡ್‌ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ದತ್ತು ಪಡೆಯಲು ಇಚ್ಛಿಸುವವರು ಅದನ್ನು ಸ್ಕ್ಯಾನ್‌ ಮಾಡಿದರೆ ಅಲ್ಲಿ ಅನಾಥ ನಾಯಿ ಮರಿಗಳ ಚಿತ್ರ ಬರುತ್ತದೆ. ತಮಗೆ ಯಾವ ನಾಯಿಮರಿ ಬೇಕೋ ಅದನ್ನು ಸೆಲೆಕ್ಟ್‌ ಮಾಡಬೇಕು. ಅ. 24ರಂದು ಆ ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿ, ಪಾಲಿಕೆಯಿಂದಲೇ ಬೆಲ್ಟ್‌ ನೀಡಿ ಅದನ್ನು ಅವರಿಗೆ ಹಸ್ತಾಂತರಿಸಲಾಗುತ್ತದೆ. ಆ ಬೀದಿ ನಾಯಿಗೆ ಮನೆ ಸಿಕ್ಕಂತಾಗುತ್ತದೆ. ಮುಂದೆ ಅದು ಬೀದಿನಾಯಿ ಆಗಿ ಉಳಿಯಲ್ಲ. ಆದರಿಂದ ಮತ್ತಷ್ಟು ಬೀದಿನಾಯಿ ಸಂತತಿ ಬೆಳೆಯುತ್ತದೆ ಎಂಬ ಭಯ ಇರುವುದಿಲ್ಲ ಎಂಬ ಆಲೋಚನೆ ಪಾಲಿಕೆಯದ್ದು.

ತಾಯಿಯೊಂದಿಗೆ ಇರುವ ಮರಿಗಳನ್ನು ದತ್ತು ನೀಡುವುದಿಲ್ಲ. ತಾಯಿ ಮಗುವನ್ನು ಬೇರೆ ಮಾಡುವುದಿಲ್ಲ. ಬರೀ ಅನಾಥ ಬೀದಿನಾಯಿ ಮರಿಗಳನ್ನಷ್ಟೇ ದತ್ತು ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸುತ್ತದೆ.

ಹುಬ್ಬಳ್ಳಿ-ಧಾರವಾಡದಲ್ಲಿ 70ಕ್ಕೂ ಅಧಿಕ ಅನಾಥ ಬೀದಿನಾಯಿ ಮರಿಗಳಿವೆ. ಒಂದು ವೇಳೆ ಎಲ್ಲ ನಾಯಿಮರಿಗಳನ್ನು ದತ್ತು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾದರೆ ದೊಡ್ಡ ನಾಯಿಗಳು ಬೇಕೆಂದರೂ ಅವುಗಳನ್ನು ಕೊಡಲು ಪಾಲಿಕೆ ರೆಡಿ. ಆದರೆ ಮೊದಲ ಆದ್ಯತೆ ನಾಯಿ ಮರಿಗಳದ್ದು ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.

ಒಟ್ಟಿನಲ್ಲಿ ಬೀದಿ ನಾಯಿಗಳ ವಿಷಯದಲ್ಲಿ ಅತ್ತ ಸುಪ್ರೀಂಕೋರ್ಟ್‌ ದೆಹಲಿಯಲ್ಲಿ ಖಡಕ್‌ ಸೂಚನೆ ಕೊಡುತ್ತಿದ್ದಂತೆ ಇತ್ತ ಪಾಲಿಕೆಯಲ್ಲಿ ಅಧಿಕಾರಿ ವರ್ಗ ಎಚ್ಚೆತ್ತಿದ್ದು, ದತ್ತು ಕೊಡುವ ಆಲೋಚನೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದಂತೂ ಸತ್ಯ.

ಆ. 24ರಂದು ಬೀದಿ ನಾಯಿಮರಿಗಳ ದತ್ತು ಕೊಡುವ ಕುರಿತು ಕಾರ್ಯಕ್ರಮ ಆಯೋಜಿಸಿದ್ದೇವೆ. ಅನಾಥ ನಾಯಿಮರಿಗಳಷ್ಟೇ ದತ್ತು ನೀಡಲಾಗುತ್ತದೆ. ಇದಕ್ಕಾಗಿ ಕ್ಯೂಆರ್‌ ಕೋಡ್‌ ಕ್ರಿಯೆಟ್‌ ಮಾಡಲಾಗಿದೆ. ಅಭಿಯಾನ ನಡೆಸಲಾಗುತ್ತದೆ. ಕೆಲವೊಂದಿಷ್ಟು ಎನ್‌ಜಿಒಗಳು ಇದಕ್ಕೆ ಸಾಥ್‌ ನೀಡುತ್ತಿದೆ ಎಂದು ಚಿಟಗುಪ್ಪಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ ತಿಳಿಸಿದ್ದಾರೆ. ಬೀದಿನಾಯಿ ಮರಿಗಳ ದತ್ತು ಕೊಡುವ ಕಾರ್ಯಕ್ರಮಕ್ಕೆ ನಾವು ಸಾಥ್‌ ನೀಡುತ್ತಿದ್ದೇವೆ. ಇದು ಒಳ್ಳೆಯ ಕಾರ್ಯಕ್ರಮ. ಇದರಿಂದ ಬೀದಿನಾಯಿಗಳ ಉಪಟಳ ತಡೆಯಲು ಇದು ಕೂಡ ಸಹಕಾರಿಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಭಿಯಾನ ನಡೆಸಲಾಗುತ್ತಿದೆ ಎಂದು ರೆವಲ್ಯೂಷನ್‌ ಮೈಂಡ್ಸ್‌ ಎನ್‌ಜಿಒ ಸದಸ್ಯ ವಿನಾಯಕ ಜೊಗಾರಿಶೆಟ್ಟರ್‌ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ