ನರಗುಂದ: ಮಾದಕ ವಸ್ತುಗಳ ಬಳಕೆ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ನೆರೆಹೊರೆಯ ವಾತಾವರಣ ಕಲುಷಿತಗೊಳಿಸುತ್ತದೆ ಎಂದು ಪಿಎಸ್ಐ ಸವಿತಾ ಮುನ್ಯಾಳ ಹೇಳಿದರು.
ಪೊಲೀಸ್ ಇಲಾಖೆಯು 112 ಸಹಾಯವಾಣಿ ಪರಿಚಯಿಸಿದೆ. ಇದರಲ್ಲಿ ಸಾರ್ವಜನಿಕರು ಮಾದಕ ವಸ್ತು ಮಾರಾಟಗಾರರು ಅಥವಾ ಕಾನೂನುಬಾಹಿರ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಗುರುತನ್ನು ಗುಪ್ತವಾಗಿ ಇಡಲಾಗುವುದು ಮತ್ತು ಸಂಪೂರ್ಣ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.
ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಜನರು ಮಾದಕ ವಸ್ತುಗಳನ್ನು ಬಳಕೆ ಮಾಡಿ ತಾವೇ ಕಾಯಿಲೆಯನ್ನು ತಂದುಕೊಳ್ಳುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರ್ವೆ ಪ್ರಕಾರ ಮದ್ಯ ವ್ಯಸನಕ್ಕೆ ಒಳಗಾಗಿ ವಾಹನ ಚಲಾಯಿಸಿದವರಲ್ಲಿ 30% ಅಪಘಾತಗಳು ನಡೆದಿದ್ದರೆ, ಶೇ. 40ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ಮಾದಕ ವಸ್ತುಗಳನ್ನು ದೂರವಿಟ್ಟು ಚಟಕ್ಕೆ ಒಳಗಾಗಿರುವ ಜನರನ್ನು ಹೊರತರಲು ಸರ್ಕಾರ ರೂಪಿಸಿರುವ ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿದ್ದು ಸಂಘ-ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ನೈತಿಕ ಮೌಲ್ಯ ಮೈಗೂಡಿಸಿಕೊಳ್ಳುವುದು ಹಾಗೂ ಸಕಾರಾತ್ಮಕ ಮನೋಭಾವದಿಂದ ಶಾಂತಿಯುತ, ಆರೋಗ್ಯವಂತ ಜೀವನ ನಡೆಸುವ ಜತೆಗೆ ಮಾದಕ ವಸ್ತು ಹಾಗೂ ಅಕ್ರಮ ಚಟುವಟಿಕೆಯಿಂದ ಜನರು ದೂರವಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಕ್ಕಮ್ಮ ವಗ್ಗರ, ಪ್ರೇಮ ಉಗಲಾಟ, ವೀಣಾ ಮುಂಡಾಸದ, ಗುಡದಪ್ಪ, ದಿನೇಶಗೌಡ ಪಾಟೀಲ, ಅಮಿತ ಗೌಡರ, ಲಕ್ಷ್ಮಿ ತೋರ್ಗಲ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪದವಿ ಮತ್ತು ಬಿಇಡಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.