ಮಳೆಗೆ ಹಾನಿ: ವಿವಿಧೆಡೆ ಅಧಿಕಾರಿಗಳ ಪರಿಶೀಲನೆ

KannadaprabhaNewsNetwork | Published : Jul 20, 2024 12:48 AM

ಸಾರಾಂಶ

ಕೆಳಗಿನೂರು ಗ್ರಾಪಂನ ಎಸ್ಸಿ ಕೇರಿಯಲ್ಲಿ ವಿದ್ಯುತ್ ಕಂಬ ಮುರಿದಿದ್ದು, ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಬ ಅಳವಡಿಸಿದ್ದಾರೆ. ಮಾವಿನಕುರ್ವಾ ಗ್ರಾಪಂನ ಗುಡ್ಡಕುಸಿತವಾಗಬಹುದಾದ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೋಟಿಸ್ ನೀಡುವ ಮೂಲಕ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.

ಹೊನ್ನಾವರ: ತಾಲೂಕಿನಲ್ಲಿ ವರುಣಾರ್ಭಟಕ್ಕೆ ವಿವಿಧೆಡೆ ಹಾನಿ ಸಂಭವಿಸಿದೆ. ಗುಡ್ಡ ಕುಸಿಯುವ ಸ್ಥಳದ ಜನರಿಗೆ ನೊಟೀಸ್ ನೀಡುವ ಮೂಲಕ ಅಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.ಕೆಳಗಿನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಪ್ಸರಕೊಂಡ ಗ್ರಾಮದ ಗುಡ್ಡ ಕುಸಿತದ ಪ್ರದೇಶಕ್ಕೆ ಜಿಪಂ ಯೋಜನಾಧಿಕಾರಿಗಳು ಹಾಗೂ ತಾಪಂ ಆಡಳಿತಾಧಿಕಾರಿಗಳಾದ ವಿನೋದ್ ಅಣ್ವೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಳಗಿನೂರು ಗ್ರಾಪಂನ ಎಸ್ಸಿ ಕೇರಿಯಲ್ಲಿ ವಿದ್ಯುತ್ ಕಂಬ ಮುರಿದಿದ್ದು, ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಬ ಅಳವಡಿಸಿದ್ದಾರೆ. ಮಾವಿನಕುರ್ವಾ ಗ್ರಾಪಂನ ಗುಡ್ಡಕುಸಿತವಾಗಬಹುದಾದ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೊಟೀಸ್ ನೀಡುವ ಮೂಲಕ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ನೋಡೆಲ್ ಅಧಿಕಾರಿ, ತಾಪಂ ಸಹಾಯಕ ನಿರ್ದೇಶಕರು, ಗ್ರಾಪಂ ಸದಸ್ಯ ಅಣ್ಣಪ್ಪ ಗೌಡ, ಪಿಡಿಒ, ಸಿಬ್ಬಂದಿ ಹಾಜರಿದ್ದರು.ರಸ್ತೆ ಸಂಪರ್ಕ ಕಡಿತ: ತಾಲೂಕಿನ ಕೊಡಾಣಿಯಿಂದ ಬಾಳೆಮೇಟ್ ಹೋಗುವ ರಸ್ತೆ ಹಾಗೂ ಮೇಲ್ಭಾಗದ ಗುಡ್ದ ಕುಸಿತ ಆಗಿ 3 ಗ್ರಾಮಗಳ ಸರಿಸುಮಾರು 250 ಕುಟುಂಬಕ್ಕೆ ಸಂಪರ್ಕ ಕಡಿತವಾಗಿದೆ.

ಎಸಿ ಭೇಟಿ: ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ. ನಯನಾ ಅಧಿಕಾರಿ ವರ್ಗದವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ‌. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಮಳೆಹಾನಿ ಪ್ರದೇಶಕ್ಕೆ ತಹಸೀಲ್ದಾರ್‌ ಭೇಟಿ

ಮುಂಡಗೋಡ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಮನೆಗಳು ಕುಸಿದಿವೆ. ಸಾಕಷ್ಟು ಆಸ್ತಿ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಧಿಕಾರಿಗಳ ದಂಡು ಹಾನಿ ಪ್ರದೇಶಗಳ ಭೇಟಿ ನೀಡುತ್ತಿದೆ.

ಶುಕ್ರವಾರ ಒಂದೇ ದಿನ ತಾಲೂಕಿನಲ್ಲಿ ೧೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಈವರೆಗೆ ತಾಲೂಕಿನಲ್ಲಿ ಹಾನಿಗೊಳಗಾದ ಮನೆಗಳ ಸಂಖ್ಯೆ ೨೩ಕ್ಕೇರಿದಂತಾಗಿದೆ. ಪಾಳಾ ಗ್ರಾಪಂ ವ್ಯಾಪ್ತಿಯ ಕಲಕೊಪ್ಪ ಗ್ರಾಮದ ಜೈತುನಬಿ ಸರದಾರಖಾನ, ಅಗಡಿ ಗ್ರಾಮದ ಬಸವಂತಪ್ಪ ಪುಟ್ಟಪ್ಪ ತಳವಾರ, ಮಾದೇವಿ ನಾಗಪ್ಪ ಲಮಾಣಿ, ಹನುಮಂತ ಚಂದಪ್ಪ ಲಮಾಣಿ, ಅಜ್ಜಳ್ಳಿ ಗ್ರಾಮದ ಸುಭಾಸ ಬಿಸೆಟ್ಟಿ, ನಂದಿಕಟ್ಟಾ ಗ್ರಾಮದ ಶುಬನಪ್ಪ ಅರಶಿಣಗೇರಿ, ಮಳಗಿ ಗ್ರಾಮದ ಹೊನ್ನಕ್ಕ ಭರಮಪ್ಪ ಮಾದರ, ಕರಗಿನಕೊಪ್ಪ ಗ್ರಾಮದ ಪ್ರೇಮ್ ಟಾಕರಪ್ಪ ಲಮಾಣಿ ಹಾಗೂ ಚಿಗಳ್ಳಿ ಗ್ರಾಮದ ಸೋಮಣ್ಣ ಹುಲಮನಿ ಎಂಬುವರಿಗೆ ಸೇರಿದ ಮನೆ ಕುಸಿದಿವೆ.ಬೆಡಸಗಾಂವ, ಶಾನವಳ್ಳಿ ಭಾಗದಲ್ಲಿಯೂ ಕೆಲ ಮನೆಗಳು ಕುಸಿಯುವ ಹಂತ ತಲುಪಿವೆ. ಶುಕ್ರವಾರ ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಪ್ರದೀಪ ಭಟ್ ಮುಂತಾದವರು ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕ್ರಮ ಕೈಗೊಂಡಿದ್ದಾರೆ.

Share this article