ಸವಣೂರು: ತಾಲೂಕಿನಾದ್ಯಂತ ಗೋವಿನಜೋಳ, ಶೇಂಗಾ, ಸೋಯಾಅವರೆ ಮತ್ತು ಹತ್ತಿ ಬೆಳೆಗಳಲ್ಲಿ ಕಾಣಿಸಿಕೊಂಡಿರುವ ರೋಗಗಳ ಹತೋಟಿಗಾಗಿ ರೈತರಿಗೆ ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಪ್ರಕಟಣೆಯ ಮೂಲಕ ಸಲಹೆಗಳನ್ನು ನೀಡಿದ್ದಾರೆ.ತಾಲೂಕಿನಾದ್ಯಂತ 2025- 26ನೇ ಸಾಲಿನ ಮುಂಗಾರು ಮಳೆ ಕೆಲವು ದಿನಗಳಿಂದ ಸತತವಾಗಿ ಸುರಿದ ಕಾರಣ ತೆಗ್ಗು ಪ್ರದೇಶದ ರೈತರ ಹೊಲಗಳಲ್ಲಿ ನೀರು ನಿಂತಿದ್ದು, ಹೊಲಗಳ ಒಡ್ಡುಗಳಲ್ಲಿ ನಿಂತ ನೀರನ್ನು ಬಸಿಗಾಲುವೆ ಅಥವಾ ಹರಿ ಮಾಡುವುದರ ಮೂಲಕ ಹೊರ ಹಾಕಲು ಪ್ರಯತ್ನ ಮಾಡಬೇಕು.ಗೋವಿನ ಜೋಳ ಮತ್ತು ಹತ್ತಿ ಬೆಳೆಗಳಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19, 13:0:45 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 3ರಿಂದ 5 ಗ್ರಾಂ ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು. ನಂತರ ಮೆಕ್ಕಜೋಳ ಬೆಳೆಗೆ ಲದ್ದಿ ಹುಳುವಿನ ಹತೋಟಿಗಾಗಿ ಇಮ್ಯಾಮೆಕ್ಟಿನ್ ಬೆಂಜೋಯೆಟ್ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಹತ್ತಿ, ಸೋಯಾಅವರೆ ಹಾಗೂ ಶೇಂಗಾ ಬೆಳೆಗಳ ಬುಡಕ್ಕೆ ಕಾರ್ಬನ್‌ಡೈಜಿಮ್ ಪ್ರತಿ ಲೀಟರ್ ನೀರಿಗೆ 3 ಗ್ರಾಂ ಅಥವಾ ಥೈಯೋಫಿನೆಟ್ ಮಿಥೈಲ್ ಪ್ರತಿ ಲೀಟರ್ ನೀರಿಗೆ 2 ಗ್ರಾಂನಂತೆ ದ್ರಾವಣವನ್ನು ಸುರಿಯಬೇಕು.ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆಯಿರುವುದರಿಂದ ಹಳದಿ, ಕೆಂಪು ಆಗುವುದನ್ನು ತಪ್ಪಿಸಲು ನ್ಯಾನೋ ಡಿಎಪಿ, ನ್ಯಾನೋ ಯೂರಿಯಾ, 19:19:19 ಹಾಗೂ 13:0:45 ಪೋಷಕಾಂಶ ಬಳಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ
ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಬುಧವಾರ ಆಗಾಗ ಜಿಟಿ ಜಿಟಿ ಮಳೆಯಾಗಿದೆ.ಹಾವೇರಿ, ಹಾನಗಲ್ಲ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾಂವಿ, ಸವಣೂರು ಭಾಗದಲ್ಲೂ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾದ್ಯಂತ 5.90 ಮಿಮೀ ಮಳೆ ಬಿದ್ದಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 9.67 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದೆ. 33 ಮನೆಗಳಿಗೆ ಹಾನಿಯಾಗಿವೆ. ಮಳೆಯಿಂದ ಜಿಲ್ಲೆಯಲ್ಲಿ ಎರಡು ದನದ ಕೊಟ್ಟಿಗೆಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.