ಶಾಲಾವಧಿಯಲ್ಲಿ ವಿದ್ಯಾರ್ಥಿಗಳು ಕೋಚಿಂಗ್‌ ಕೇಂದ್ರಗಳ ಪಾಲು!

KannadaprabhaNewsNetwork |  
Published : Jun 25, 2025, 11:50 PM IST
ಚಿತ್ರ 25ಬಿಡಿಆರ್‌8ಔರಾದ್‌ ತಾಲೂಕಿನ ಗ್ರಾಮವೊಂದರ ಸರ್ಕಾರಿ  ಶಾಲೆ (ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾತ್ರ ಆಗ್ತಿವೆ. ಆದ್ರೆ ಮಕ್ಕಳೆಲ್ಲರೂ ಖಾಸಗಿಯಾಗಿ ವ್ಯಾಸಂಗ ಮಾಡ್ತಿರುವ ಹೊಸ ಪದ್ಧತಿ ತಾಲೂಕಿನಲ್ಲಿ ನಡೆಯುತ್ತಿದೆ‌. ಕೋಚಿಂಗ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ದಾಖಲಾಗಿ ಖಾಸಗಿಯಾಗಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳಲ್ಲಿ ಹಾಜರಾಗ್ತಿದ್ದಾರೆ ಎಂಬ ಮಾತುಗಳು ಇದೀಗ ವ್ಯಾಪಕವಾಗಿವೆ.

ಭಾರಿ ಗೋಲ್ಮಾಲ್‌

ಔರಾದ್‌ನಲ್ಲಿ ಶಾಲಾ ದಾಖಲಾತಿ ಇಲ್ಲಿ, ಹಾಜರಾತಿ ಅಲ್ಲಿ ! । ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಶೂಜ್‌ ಯಾರ ಪಾಲು?

ಅನೀಲಕುಮಾರ ದೇಶಮುಖ

ಕನ್ನಡಪ್ರಭ ವಾರ್ತೆ ಔರಾದ್‌

ಬಹುತೇಕ ಸರ್ಕಾರಿ ಶಾಲೆಗಳು ಈಗ ಕಚೇರಿಗಳಂತೆ ಕೆಲಸ ಮಾಡ್ತಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾತ್ರ ಆಗ್ತಿವೆ. ಆದ್ರೆ ಮಕ್ಕಳೆಲ್ಲರೂ ಖಾಸಗಿಯಾಗಿ ವ್ಯಾಸಂಗ ಮಾಡ್ತಿರುವ ಹೊಸ ಪದ್ಧತಿ ತಾಲೂಕಿನಲ್ಲಿ ನಡೆಯುತ್ತಿದೆ‌. ಕೋಚಿಂಗ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ದಾಖಲಾಗಿ ಖಾಸಗಿಯಾಗಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳಲ್ಲಿ ಹಾಜರಾಗ್ತಿದ್ದಾರೆ ಎಂಬ ಮಾತುಗಳು ಇದೀಗ ವ್ಯಾಪಕವಾಗಿವೆ.

ತಾಲೂಕಿನಾದ್ಯಂತ ಸರ್ಕಾರಿ ಶಾಲೆಯಲ್ಲಿನ ಅದರಲ್ಲೂ ವಿಶೇಷವಾಗಿ ನಾಲ್ಕನೆ ಮತ್ತು ಐದನೆ ತರಗತಿ ವಿಧ್ಯಾರ್ಥಿಗಳು ನವೋದಯ ತರಬೇತಿ ಹೆಸರಿನ ಕೋಚಿಂಗ್‌ ಕೇಂದ್ರಗಳಲ್ಲಿ ಹೊರಟಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಯ ಶಿಕ್ಷಕರು ವಿಧ್ಯಾರ್ಥಿಗಳಿಲ್ಲದೆ ''''''''''''''''ನಾಮ್‌ ಕೇ ವಾಸ್ತೆ'''''''''''''''' ಶಾಲೆಗಳಿಗೆ ಹಾಜರಾಗುವಂತಾಗಿದೆ.

ತಾಲೂಕಿನ ಬಹುತೇಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಗರಿಷ್ಠ ಮಟ್ಟದಲ್ಲಾಗ್ತಿದೆ. ನಗರ ಪ್ರದೇಶದ ಮಕ್ಕಳು ಗ್ರಾಮೀಣ ಮೀಸಲಾತಿ ಪಡೆಯಲು ಹಳ್ಳಿಗಳ ಶಾಲೆಯಲ್ಲಿ ಪೋಷಕರು ದಾಖಲಾತಿ ಮಾಡಿ ಪಟ್ಟಣದಲ್ಲಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳಲ್ಲಿ ಮಕ್ಕಳನ್ನು ಸೇರಿಸ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ಶಿಕ್ಷಕರ ಹುದ್ದೆ ಉಳಿದುಕೊಂಡಿದೆ.

ಶಾಲೆಯಲ್ಲಿ ಗೊಲ್ಮಾಲ್‌:

ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂಜ್‌ ವಿತರಣೆಯಂಥ ಯೋಜನೆಗಳಡಿಯಲ್ಲಿ ಭಾರಿ ಅಕ್ರಮ ಕೂಡ ಈ ದಾಖಲಾತಿ ಕಾಂಡದಿಂದ ಬಯಲಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಇದ್ದರೂ ಅದನ್ನು ತೋರಿಸದ ಮುಖ್ಯ ಶಿಕ್ಷಕರು ಸರ್ಕಾರದ ಯೋಜನೆಯ ಅನುದಾನ ಕೂಡ ಜೇಬಿಗೆ ಹಾಕಿಕೊಳ್ತಿದ್ದಾರೆ ಎಂಬ ಆರೋಪದ ನಡುವೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಸಾಕಷ್ಟು ಗೋಲ್ಮಾಲ್‌ ಆಗ್ತಿದೆ. ಇದೆಲ್ಲ ವ್ಯವಸ್ಥಿತ ರೀತಿಯಲ್ಲಿ ನಡಯುತ್ತಿದ್ದರೂ ಶಿಕ್ಷಣ ಇಲಾಖೆ ಕಂಡೂ ಕಾಣದಂತೆ ಜಾಣ ಮೌನ ವಹಿಸಿರುವುದು ವಿಪರ್ಯಾಸದ ಸಂಗತಿ.

ಶಾಲಾವಧಿಯಲ್ಲಿ ವಿಧ್ಯಾರ್ಥಿಗಳು ಕೋಚಿಂಗ್‌ ಕೇಂದ್ರಗಳ ಪಾಲು:

ಪಟ್ಟಣದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ನವೋದಯ ಕೋಚಿಂಗ್‌ ಕೇಂದ್ರಗಳಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಕ್ಕಳು ಶಾಲಾವಧಿಯಲ್ಲಿ ಹಾಜರಾಗ್ತಿರುವುದು ಸಾಮಾನ್ಯವಾಗಿದೆ. ಪೋಷಕರೇ ತಮ್ಮ ಮಕ್ಕಳಿಗೆ ನವೋದಯ ತರಬೇತಿ ನೀಡುವ ಹೆಸರಿನಲ್ಲಿ ಹಣ ನೀಡಿ ಅನಧಿಕೃತ ಕೇಂದ್ರಗಳಲ್ಲಿ ಮಕ್ಕಳನ್ನು ಕಳಿಸ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳು ಭಣ ಭಣಗೊಳ್ತಿವೆ.

ಔರಾದ್‌ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿದ್ದಾರೆ ಯಾವ ಶಾಲೆಯಲ್ಲಿ ಎಷ್ಟು ದಾಖಲಾತಿ ಇದೆ ಹಾಜರಾತಿ ಎಷ್ಟಿದೆ ಅಂತ ನಿತ್ಯ ಮಾಹಿತಿ ಪಡೆಯುವ ಕೆಲಸ ಮಾಡಬೇಕು ಆದರೆ ಇದೆಲ್ಲ ಯಾತಕ್ಕೆ ಎಂದು ಸರ್ಕಾರಕ್ಕೆ ಲೆಕ್ಕ ಮಾತ್ರ ಕೊಡ್ತಿದ್ದಾರೆ. ಯಾವೊಬ್ಬ ಅಧಿಕಾರಿ ಕಚೇರಿ ಬಿಟ್ಟು ಶಾಲೆಗಳಿಗೆ ಹೋಗ್ತಿಲ್ಲ ಹೋದ್ರೂ ಎಲ್ಲ ಗೊತ್ತಿದ್ದೂ ಸುಮ್ಮನೆ ಇರ್ತಿದ್ದಾರೆ. ಈ ನಕಲಿ ದಾಖಲಾತಿ ಗೋಲ್ಮಾಲ್‌ ತಡೆಯದಿದ್ರೆ ಉಗ್ರ ಹೋರಾಟ ಮಾಡುವದು ಅನಿವಾರ್ಯ.

- ಸುಧಾಕರ ಕೊಳ್ಳುರ, ಮುಖಂಡ

ಸ್ಥಳೀಯವಾಗಿ ಅನಧಿಕೃತ ಕೋಚಿಂಗ್‌ ಕೇಂದ್ರಗಳಲ್ಲಿ ಶಾಲಾವಧಿಯಲ್ಲಿ ಮಕ್ಕಳು ಇರುವುದು ಗಮನಕ್ಕೆ ಬಂದಿದೆ. ಪೊಲೀಸರ ಸಹಾಯದಿಂದ ದಾಳಿ ನಡೆಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಯೋಜನೆಗಳ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು.

- ರಂಗೇಶ ಬಿ.ಜೆ, ಕ್ಷೇತ್ರ ಶಿಕ್ಷಣಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ