ಕಾಫಿ ತೋಟಗಳ ಇ- ಹರಾಜಿಗೆ ಕೆಜಿಎಫ್‌ ವಿರೋಧ

KannadaprabhaNewsNetwork |  
Published : Jun 25, 2025, 11:50 PM IST
ಸರ್ಫೇಸಿ ಕಾಯ್ದೆಯಡಿಯಲ್ಲಿ ಬ್ಯಾಂಕುಗಳು ಇ-ಹರಾಜು ಕೈಬಿಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವಣ್ಣ ಅವರ ನೇತೃತ್ವದಲ್ಲಿ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು , ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರ ಸಾಲಗಳ ವಸೂಲಾತಿಗಾಗಿ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಮಾಡಲು ಮುಂದಾಗಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಖಂಡಿಸುತ್ತದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌)ದ ಅಧ್ಯಕ್ಷ ಎಚ್.ಬಿ.ಶಿವಣ್ಣ ಹೇಳಿದರು.

- ಲೀಡ್‌ ಬ್ಯಾಂಕ್‌ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಲು ಆಗ್ರಹ । ಸುದ್ದಿಗೋಷ್ಠಿಯಲ್ಲಿ ಕೆಜಿಎಫ್‌ ಅಧ್ಯಕ್ಷ ಶಿವಣ್ಣ ಒತ್ತಾಯ । ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರ ಸಾಲಗಳ ವಸೂಲಾತಿಗಾಗಿ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಮಾಡಲು ಮುಂದಾಗಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಖಂಡಿಸುತ್ತದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌)ದ ಅಧ್ಯಕ್ಷ ಎಚ್.ಬಿ.ಶಿವಣ್ಣ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಬೆಳೆಗಾರರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಎಲ್ಲಾ ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸರ್ಫೇಸಿ ಕಾಯ್ದೆಯ ನೆಪದಲ್ಲಿ ರೈತ ಬೆಳೆಗಾರರ ಭೂಮಿಗಳನ್ನು ಹರಾಜು ಹಾಕುವುದನ್ನು ಆರು ತಿಂಗಳ ಕಾಲ ತಡೆ ಹಿಡಿಯುವಂತೆ ಬೆಳೆಗಾರರಿಗೆ ಬ್ಯಾಂಕುಗಳು ಓಟಿಎಸ್ ಮೂಲಕ ಸೌಹಾರ್ದ ಯುತವಾಗಿ ಸಾಲ ತಿರುವಳಿ ಮಾಡಲು ಅವಕಾಶ ಕಲ್ಪಿಸಬೇಕೆಂದು ಕಟ್ಟುನಿಟ್ಟಾದ ಸೂಚನೆ ನೀಡಿದರು ಎಂದು ಹೇಳಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಆಯೋಜಿಸಿ ಅಲ್ಲಿಯೂ ಕೂಡಾ ಬೆಳೆಗಾರರ ತೋಟಗಳನ್ನು ಇ-ಹರಾಜು ಮೂಲಕ ಮಾರುವ ಬದಲು ಬ್ಯಾಂಕ್ ಹಾಗೂ ಬೆಳೆಗಾರರು ಪರಸ್ಪರ ಮಾತುಕತೆ ಮೂಲಕ ಋಣಮುಕ್ತರಾಗಲು ಅವಕಾಶ ಕಲ್ಪಿಸಿಕೊಡುವುದಾಗಿ ಒಮ್ಮತದ ತೀರ್ಮಾನಕ್ಕೆ ಬರಲಾಗಿತ್ತು ಎಂದರು.

ಕೆಲವು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಸುಸ್ತಿದಾರರಾಗಿರುವ ಬೆಳೆಗಾರರ ಸಾಲವನ್ನು ಮಾತುಕತೆಗಳ ಮೂಲಕ ತೀರ್ಮಾನ ಮಾಡುವುದನ್ನು ಪರಿಗಣಿಸದೆ ಕೆಲವು ರಿಯಲ್ ಎಸ್ಟೇಟ್ ಬಂಡವಾಳ ಶಾಹಿಗಳ ಕೈಗೊಂಬೆಗಳಂತೆ ವರ್ತಿಸುತ್ತಿ ರುವುದು ಬೆಳೆಗಾರರ ಗಮನಕ್ಕೆ ಬಂದಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸದಿದ್ದರೆ ರೈತ ಬೆಳೆಗಾರರು ತಮ್ಮ ಜೀವನಾ ಧಾರವಾಗಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅನಿವಾರ್ಯವಾಗಿ ಒಪ್ಪಿಸಬೇಕಾದೀತು ಎಂದು ಹೇಳಿದರು.

ಈ ಕೂಡಲೇ ತಾವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ಗಳನ್ನು ನೀಡಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು. ಸ್ವಾಭಿಮಾನಿ ಬೆಳೆಗಾರರ ಫಲವತ್ತಾದ ಭೂಮಿಯನ್ನು ಕೆಲವು ಬ್ಯಾಂಕ್ ಅಧಿಕಾರಿಗಳು ದುರುದ್ದೇಶದಿಂದ ಇ-ಹರಾಜು ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಬೆಳೆಗಾರರ ಸಂಘಟನೆಗಳು ಬ್ಯಾಂಕ್‌ಗಳ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಬೆಳೆಗಾರರ ಸಾಲ ತೀರುವಳಿ ಆದ ನಂತರವೂ ಕೆನರಾ ಬ್ಯಾಂಕ್ ಮೂಡಿಗೆರೆ ಶಾಖೆಯಿಂದ ಮೂಲ ದಾಖಲೆಗಳನ್ನು ಬೆಳೆಗಾರರಿಗೆ ಹಿಂತಿರುಗಿಸದೇ ಕಿರುಕುಳ ನೀಡುತ್ತಿದ್ದಾರೆ. ಮೂಡಿಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡುವಿನ ಮಡಕಲ್ ಗ್ರಾಮದ ಬೆಳೆಗಾರ ಕೆ.ಕೆ.ಸುರೇಶ್ ಎಂಬುವವರು ತೋಟದ ನಿರ್ವಹಣೆಗೆ ಸಾಲ ಪಡೆದುಕೊಂಡಿದ್ದು, ಹಲವಾರು ಕಾರಣ ಗಳಿಂದ ಮರುಪಾವತಿ ಮಾಡಲು ವಿಳಂಬವಾದರೂ ಕೆನರಾ ಬ್ಯಾಂಕಿನ ಸೂಚನೆಯಂತೆ ಸಾಲ ಮರುಪಾವತಿ ಮಾಡಿದ್ದರೂ ಸಾಲದ ಭದ್ರತೆಗೆ ನೀಡಿದ್ದ ಮೂಲ ದಾಖಲೆಗಳನ್ನು ಕೇಳಿದರೆ ಬ್ಯಾಂಕ್‌ನವರು ಹಿಂತಿರುಗಿಸದೆ, ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಮುಖಂಡರಾದ ಬಾಲಕೃಷ್ಣ, ಅಶೋಕ್ ಸೂರಪ್ಪನಹಳ್ಳಿ, ಮನುಕುಮಾರ್, ಬಿ.ಎಸ್.ಜಯರಾಂ, ರತೀಶ್, ಹಾಲಪ್ಪಗೌಡ, ಕೆರೆಮಕ್ಕಿ ಮಹೇಶ್, ಸುರೇಶ್, ದೀಪಕ್‌ ದೊಡ್ಡಯ್ಯ ಸೇರಿದಂತೆ ಕಾಫಿ ಬೆಳೆಗಾರರು ಇದ್ದರು. 25 ಕೆಸಿಕೆಎಂ 5ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಕೈಬಿಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ನೇತೃತ್ವದಲ್ಲಿ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ