ಇಂದು ರೆಡ್ ಅಲರ್ಟ್, ಅಂಗನವಾಡಿ, ಶಾಲಾ-ಕಾಲೇಜಿಗೆ ರಜೆ

KannadaprabhaNewsNetwork |  
Published : Jun 25, 2025, 11:50 PM IST
ಚಿತ್ರ :  24ಎಂಡಿಕೆ4 : ಹುದಿಕೇರಿ-ಬಿರುನಾಣಿ ರಸ್ತೆ ನಡುವೆ ಭೂಕುಸಿತ ಉಂಟಾಗಿರುವುದು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಬುಧವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ಹಿನ್ನೆಲೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಬುಧವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಗುರುವಾರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಬುಧವಾರ ಬೆಳಗ್ಗೆ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ಗುರುವಾರವೂ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸಿದ್ದಾಪುರ, ವಿರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ನಾಪೋಕ್ಲು ಸೇರಿ ಹಲವು ಕಡೆಯಲ್ಲಿ ಉತ್ತಮ ಮಳೆಯಾಯಿತು.

ಶೀಟ್ ಹಾರಿ ಹೋಗಿ ತೀವ್ರ ಹಾನಿ:

ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯಲ್ಲಿ ಒಳಹರಿವು ಹೆಚ್ಚಳವಾಗಿದೆ. ಇದರಿಂದ ಬುಧವಾರ ಸುಮಾರು 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಯವಕಾಪಾಡಿ ಗ್ರಾಮದ ಚೆಂಗಪ್ಪ ರವರ ವಾಸದ ಮನೆ ಭಾರೀ ಗಾಳಿ ಮಳೆಗೆ ಮನೆಯ ಕಲ್ನರು ಶೀಟ್ ಹಾರಿ ಹೋಗಿ ತೀವ್ರ ಹಾನಿಯಾಗಿದೆ.

ಕೊಡಗಿನ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು ಮಂಗಳವಾರ ಸಂಜೆಯಿಂದಲೇ ಮುಂದುವರೆದಿರುವ ಮಳೆ ರಾತ್ರಿ ಇಡಿ ಸುರಿದಿದ್ದು ಬುಧವಾರವೂ ಸಹ ಮುಂದುವರೆದಿದೆ.

ಇದರಿಂದ ದಕ್ಷಿಣ ಕೊಡಗಿನ ಘಟ್ಟ ಪ್ರದೇಶಗಳಾದ ಬಿರುನಾಣಿ, ಶ್ರೀಮಂಗಲ, ಟಿ-ಶೆಟ್ಟಿಗೇರಿ, ಬಿ. ಶೆಟ್ಟಿಗೇರಿ, ಕುಟ್ಟ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗಾಳಿ ಸಹಿತ ತೀವ್ರ ಮಳೆ ಸುರಿಯುತ್ತಿದೆ. ಆದರೆ ಪೊನ್ನಂಪೇಟೆ ಗೋಣಿಕೊಪ್ಪಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆ ಆಗುತ್ತಿದ್ದು ಘಟ್ಟ ಪ್ರದೇಶಗಳಲ್ಲಿ ಕುಂಭ ದ್ರೋಣ ಮಳೆ ಮುಂದುವರೆದಿರುವುದು ಪ್ರಾಕೃತಿಕ ವಿಸ್ಮಯ ವಾಗಿದೆ. ಮಳೆಯಿಂದ ಅಲ್ಲಲ್ಲಿ ತೋಡುಗಳು ತುಂಬಿ ಹರಿಯುತ್ತಿದ್ದು ಇಲ್ಲಿನ ಪ್ರಮುಖ ನದಿಗಳಾದ ಲಕ್ಷ್ಮಣತೀರ್ಥ ರಾಮತೀರ್ಥ ಮತ್ತು ಕಕ್ಕಟ್ಟ್ ಪೊಳೆ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಸಂಚಾರ ಕಡಿತ:

ಬಿರುನಾಣಿ- ಹುದಿಕೇರಿ ನಡುವಿನ ಹೈಸೊಡ್ಲೂರು- ಪೊರಾಡು ಸೇತುವೆ ಬಳಿ ರಸ್ತೆಗೆ ಬರೆ ಕುಸಿತವಾಗಿ ರಸ್ತೆಯ ಅರ್ಧ ಭಾಗಕ್ಕಿಂತ ಹೆಚ್ಚು ಮಣ್ಣು ತುಂಬಿಕೊಂಡಿದೆ. ಇದರಿಂದ ಲಘು ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು ದೊಡ್ಡ ವಾಹನಗಳು ಮತ್ತು ಶಾಲಾ ಬಸುಗಳಿಗೆ ಸಂಚಾರ ಕಡಿತವಾಗಿದೆ. ತೀವ್ರ ಮಳೆಯಿಂದ ರಸ್ತೆಗಳಲ್ಲಿ ನದಿ ತೋಡಿನಂತೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತ್ರಾಸ ದಾಯಕವಾಗಿ ಕಂಡುಬಂದಿದೆ. ಈ ಭಾಗದಲ್ಲಿ ತೀವ್ರವಾಗಿ ಮಳೆ ಸುರಿಯುತ್ತಿದ್ದರೂ ಶಿಕ್ಷಣ ಇಲಾಖೆ ತಡವಾಗಿ ಬುಧವಾರ ಬೆಳಿಗ್ಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಬಹಳಷ್ಟು ಕಡೆ ಶಾಲಾ ಬಸುಗಳು ಗ್ರಾಮೀಣ ಭಾಗಕ್ಕೆ ತೆರಳಿದ್ದರಿಂದ, ಶಾಲಾ ಬಸ್ಸು, ಖಾಸಗಿ ಬಸ್ಸು ಅವಲಂಭಿಸಿ ಮಕ್ಕಳು ಎಂದಿನಂತೆ ಗಾಳಿ ಮಳೆಯ ನಡುವೆ ಶಾಲೆಗೆ ತೆರಳಿದರು. ಶಿಕ್ಷಣ ಇಲಾಖಾಧಿಕಾರಿಗಳು ತಡವಾಗಿ ರಜೆಯ ಬಗ್ಗೆ ತೆಗೆದುಕೊಂಡ ನಿರ್ಧಾರದಿಂದ ಶಾಲಾ ಮಕ್ಕಳು ಹಾಗೂ ಪೋಷಕರು ಪರದಾಡುವಂತೆ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಶಾಲೆಯ ಆಡಳಿತ ಮಂಡಳಿ ಸಹ ಗೊಂದಲಕ್ಕೆ ಈಡಾಗಿ ಸಮಸ್ಯೆ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹುದಿಕೇರಿಯ ಸಮೀಪ ಕೋಣಗೇರಿ ಗ್ರಾಮದ ಕಾಡ್ಯಮಾಡ ಕಿರಣ್ ಅವರ ಮನೆಯ ಸಮೀಪ ಬರೆ ಕುಸಿತವಾಗಿ ಮನೆಗೆ ಹಾನಿಯಾಗಿದೆ. ಬಿರುನಾಣಿ-ಪರಕಟಕೇರಿ ಗ್ರಾಮದಲ್ಲಿ ತೀವ್ರ ಮಳೆಯಿಂದ ರಸ್ತೆ ಮಳೆ ಹರಿಯುತ್ತಿರುವ ನೀರಿನ ನಡುವೆ ಶಾಲಾ ಬಸ್, ಖಾಸಗಿ ಬಸ್ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂದಿದೆ.

ಮಳೆ ವಿವರ :

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 60.92 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.50 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1234.91 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 582.32 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 57.18 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 49.95 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 73.52 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 107.05 ಮಿ.ಮೀ. ಮಳೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ 16.90 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ : ಮಡಿಕೇರಿ ಕಸಬಾ 22, ನಾಪೋಕ್ಲು 71.60, ಸಂಪಾಜೆ 47.50, ಭಾಗಮಂಡಲ 87.60, ವಿರಾಜಪೇಟೆ 56.40, ಅಮ್ಮತ್ತಿ 43.50, ಹುದಿಕೇರಿ 89, ಶ್ರೀಮಂಗಲ 146, ಪೊನ್ನಂಪೇಟೆ 40, ಬಾಳೆಲೆ 19.08, ಸೋಮವಾರಪೇಟೆ 83.20, ಶನಿವಾರಸಂತೆ 112, ಶಾಂತಳ್ಳಿ 160, ಕೊಡ್ಲಿಪೇಟೆ 73, ಕುಶಾಲನಗರ 8.80, ಸುಂಟಿಕೊಪ್ಪ 25 ಮಿ.ಮೀ.ಮಳೆಯಾಗಿದೆ.

..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ