ಮಹಿಳೆಯರ ಮಾನಸಿಕ ಒತ್ತಡ ತಡೆಯುವಲ್ಲಿ ಸಾಂತ್ವನ ಕೇಂದ್ರದ ಪಾತ್ರ ಮಹತ್ವದ್ದು: ಶಾಸಕ ಅಶೋಕ್ ರೈ

KannadaprabhaNewsNetwork |  
Published : Jun 25, 2025, 11:50 PM IST
ಫೋಟೋ: ೨೪ಪಿಟಿಆರ್-ಸಾಂತ್ವನ ನವೀಕೃತ ಸಾಂತ್ವನ ಕೇಂದ್ರದ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ಜನ ಶಿಕ್ಷಣ ಟ್ರಸ್ಟ್‌ನಿಂದ ನಡೆಸಲ್ಪಡುವ ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರದ ನವೀಕೃತ ಕಟ್ಟಡವನ್ನು ಮಂಗಳವಾರ ಪುತ್ತೂರು ಶಾಸಕ ಅಶೋಕ್ ಕುಮರ್ ರೈ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ದಂಪತಿ ನಡುವಿನ ವೈಮನಸ್ಸು ನಿವಾರಣೆ ಹಾಗೂ ನಡು ವಯಸ್ಸಿನ ಮಹಿಳೆಯರ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವಲ್ಲಿ ಸಾಂತ್ವನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಸಮಾಜದ ಎಲ್ಲ ವರ್ಗಕ್ಕೂ ಸಮನ್ವಯತೆ ಸಾಧಿಸಿ ನೆಮ್ಮದಿ ತರುವ ಕೆಲಸವನ್ನು ಸಾಂತ್ವನ ಕೇಂದ್ರ ಮಾಡುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಜನ ಶಿಕ್ಷಣ ಟ್ರಸ್ಟ್‌ನಿಂದ ನಡೆಸಲ್ಪಡುವ ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರದ ನವೀಕೃತ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ನಗರಸಭೆಯ ಅನುದಾನದಲ್ಲಿ ರು. ೭.೧೭ ಲಕ್ಷ ವೆಚ್ಚದಲ್ಲಿ ಸಾಂತ್ವನ ಕೇಂದ್ರದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಇಂದಿನ ದಿನಗಳಲ್ಲಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ನೀಡುವುದೇ ಮಾನಸಿಕ ಸಮಸ್ಯೆಗೆ ಮೊದಲ ಪರಿಹಾರ. ಮನೆಯಲ್ಲಿ ಮಹಿಳೆಯೊಬ್ಬರು ಇಂತಹ ಮಾನಸಿಕ ಸಮಸ್ಯೆಗೆ ಈಡಾದರೆ ಈ ಮನೆಯೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತದೆ. ಇಂತಹ ಸಮಸ್ಯೆಗಳು ಕಂಡು ಬಂದಾಗ ಪಂಡಿತರಲ್ಲಿ ಹೋಗಿ ನೂಲು ಕಟ್ಟಿಸುವ ಬದಲು ಸಾಂತ್ವನ ಕೇಂದ್ರಕ್ಕೆ ಬರುವಂತಾಗಬೇಕು ಎಂದರು.

ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ದೌರ್ಜನ್ಯ, ಮಾನಸಿಕ ಸಮಸ್ಯೆಗಳ ಮೂಲ ಹುಡುಕುವ ಮೂಲಕ ಪರಿಹಾರ ಕಂಡುಕೊಳ್ಳುವ ಕಾಯಕ ನಡೆಸುತ್ತಿರುವ ಸಾಂತ್ವನ ಕೇಂದ್ರ ಜನತೆಗೆ ಅತ್ಯಂತ ಉಪಯೋಗದಾಯಕವಾಗಿದೆ. ಇದೊಂದು ಶಕ್ತಿ ತುಂಬುವ ಕೇಂದ್ರವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲೀಲಾವತಿ ನಾಯ್ಕ್, ಸಾಂತ್ವನ ಕೇಂದ್ರದಿಂದ ನೊಂದವರಿಗೆ ಸಾಂತ್ವನ ಸಿಗಲಿ ಎಂದು ಶುಭ ಹಾರೈಸಿದರು.ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ವಚ್ಛ ಸ್ವಯಂ ಘೋಷಣಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ನಗರಸಭೆಯ ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಾಗತಿಸಿದರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತರಾದ ಬಿಂದು ಕುಮಾರಿ, ಸ್ವಾತಿ ಮತ್ತು ನಿತಿನ್ ಕುಮಾರ್ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ
ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು