ಏಜೆಂಟರ ಕೆಲಸಕ್ಕೆ ಕಡಿವಾಣ ಹಾಕಲು ತಾಕೀತು

KannadaprabhaNewsNetwork |  
Published : Sep 09, 2025, 01:01 AM IST
ಫೋಠೊ ಪೈಲ್ : 8ಬಿಕೆಲ್1 | Kannada Prabha

ಸಾರಾಂಶ

ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ.

ಭಟ್ಕಳ: ಇಲ್ಲಿನ ತಾಪಂ ಸಭಾಭವನದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.ಸಭೆಯಲ್ಲಿ ಕಂದಾಯ ಇಲಾಖೆ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ. ಇಲಾಖೆಯಲ್ಲಿ ಏಜೆಂಟರ ಕೆಲಸ ಬೇಗ ಆಗುತ್ತದೆ. ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಹೊಟೆಲ್ ಲೈಸೆನ್ಸ್‌ ನವೀಕರಣಕ್ಕೆ ಎಷ್ಟು ದಿನ ಬೇಕು ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಸಚಿವರು, ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಸಹಿಸುವುದಿಲ್ಲ. ಜನರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡಿ. ಏಜೆಂಟರಿಗೆ ಅವಕಾಶ ಕೊಡಬೇಡಿ ಎಂದು ತಾಕೀತು ಮಾಡಿದರು.

ತಾಲೂಕಿನಲ್ಲಿ ಮಳೆಗಾಲದಲ್ಲಿ ಬಿದ್ದ ರಸ್ತೆಯ ಹೊಂಡ ಕೂಡಲೇ ಮುಚ್ಚಿಸುವ ಕೆಲಸ ಮಾಡಿ ಎಂದು ಲೋಕೋಪಯೋಗಿ, ಪುರಸಭೆ, ಜಾಲಿ ಪಪಂ, ಪಪಂ ಅಭಿಯಂತರರಿಗೆ ಸೂಚಿಸಿದರು.

ಮನೆಗಳಿಗೆ ಕರೆಂಟ್ ಎನ್‌ಒಸಿ ನೀಡುತ್ತಿಲ್ಲ. ಹೀಗಾದರೆ ಮನೆಗಳಿಗೆ ಮೂಲಭೂತ ಸೌಕರ್ಯ ಕೊಡುವುದು ಹೇಗೆ ಎಂದು ಹೆಸ್ಕಾಂ ಮತ್ತು ಪಿಡಿಒ ಅವರಲ್ಲಿ ಪ್ರಶ್ನಿಸಿದ ಸಚಿವರು, ಮಾನವೀಯ ನೆಲೆಯಲ್ಲಿ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕೊಡಬೇಕು ಎಂದು ಹೇಳಿದರು.

ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕೆಲವರು ಮತ್ತು ಕೆಲವು ಗ್ರಾಮಗಳನ್ನು ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಈ ಗ್ರಾಮಗಳನ್ನು ಸೇರಿಸಲು ನನ್ನದು ಯಾವುದೇ ರೀತಿಯ ತಕರಾರು ಇಲ್ಲ. ಅಗತ್ಯ ಬಿದ್ದಲ್ಲಿ ಆ ಗ್ರಾಮಗಳನ್ನು ಕೂಡ ನಗರಸಭೆಗೆ ಸೇರಿಸಲಾಗುವುದು ಎಂದು ಸಚಿವರು ಹೇಳಿದರು.

ಸಚಿವರು ಅಂಗನವಾಡಿಗಳನ್ನು ಸ್ವಂತ ಕಟ್ಟಡದಲ್ಲಿ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವುದು ಸರಿಯಲ್ಲ ಎಂದರು.

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಅಡಕೆಗೆ ಕೊಳೆ ರೋಗ ಬಂದಿದ್ದು, ಸಮರ್ಪಕ ಸರ್ವೆ ನಡೆಸಿ ಇಲಾಖೆಯಿಂದ ಸಿಗುವ ಸಹಾಯ ರೈತರಿಗೆ ಒದಗಿಸಬೇಕೆಂದು ಸಚಿವರು ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಹೊನ್ನಾವರಕ್ಕೆ ಭಟ್ಕಳದಿಂದ ಸಂಜೆ ಸಮಯದಲ್ಲಿ ಬಸ್ಸಿಲ್ಲದೇ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಸಂಜೆ ಸಮಯದಲ್ಲಿ ಹೊನ್ನಾವರಕ್ಕೆ ಬಸ್ ಓಡಿಸಬೇಕು. ರಾತ್ರಿ ಬಸ್ಸುಗಳನ್ನು ಮೊದಲಿದ್ದಂತೆ ಓಡಿಸಬೇಕು. ಬಸ್ಸಿನ ಅವ್ಯವಸ್ಥೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಡಿಪೋ ವ್ಯವಸ್ಥಾಪಕರಿಗೆ ಸಚಿವರು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ಕಣ್ಣು, ಮೂಳೆ ಸೇರಿದಂತೆ ಕೆಲವು ತಜ್ಞ ವೈದ್ಯರ ಕೊರತೆ ಇದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣಕುಮಾರ ಸಚಿವರ ಗಮನಕ್ಕೆ ತಂದಾಗ, ಸಚಿವರು ಖಾಲಿ ಇರುವ ಹುದ್ದೆಗಳಿಗೆ ವೈದ್ಯರು ಬರಲಿದ್ದಾರೆ. ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ರೀತಿ ಮುಂದುವರಿಸಿಕೊಂಡು ಹೋಗಿ. ಆಸ್ಪತ್ರೆಯಲ್ಲಿನ ವೈದ್ಯರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಸಭೆಯಲ್ಲಿ ತಾಪಂ ಅಧಿಕಾರಿ ರಾಜೇಶ ಮಹಾಲೆ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಪ್ರಭಾರೆ ಅಧ್ಯಕ್ಷ ಅಲ್ತಾಪ್ ಖರೂರಿ, ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ನಾಮನಿರ್ದೇಶಿತ ಸದಸ್ಯ ಭಾಸ್ಕರ ನಾಯ್ಕ ಕಾಯ್ಕಿಣಿ, ಅಧಿಕಾರಿಗಳಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು