ಒಳಮೀಸಲಾತಿ ಅನ್ಯಾಯ ಖಂಡಿಸಿ ಕೇಶ ಮುಂಡನೆ

KannadaprabhaNewsNetwork |  
Published : Sep 09, 2025, 01:01 AM IST
8ಕೆಕೆಆರ್1:ಕುಕನೂರು ಪಟ್ಟಣದಲ್ಲಿ ಅವೈಜ್ಞಾನೀಕ ಒಳಮೀಸಲಾತಿ ವಿರೋಧಿಸಿ ಜರುಗಿದ ಪ್ರತಿಭಟನೆಯಲ್ಲಿ ಕೇಶ ಮುಂಡನೆ ಮಾಡುವ ಮೂಲಕ ಪ್ರತಿಭಟನಾಕಾರರು ಪ್ರತಿಭಟಿಸಿದರು. | Kannada Prabha

ಸಾರಾಂಶ

ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಾಪಾಲು ನೀಡುವ ಮೂಲಕ ಬಂಜಾರ, ಕೊರಮ, ಕೊರಚ, ಭೋಮಿ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಪ್ರಮಾಣ ನೀಡಬೇಕು.

ಕುಕನೂರು:

ಒಳ ಮೀಸಲಾತಿ ಸಮೀಕ್ಷೆ ಅವೈಜ್ಞಾನಿಕವಾಗಿದ್ದು ಇದರಿಂದ ಕೊರಚ, ಕೊರಮ, ಭೋವಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಕೊರಮ, ಕೊರಚ, ಲಂಬಾಣಿ, ಭೋವಿ (ಕೊಲಂಬೋ) ಸಮಾಜದವರು ಅರಬೆತ್ತಲೆ, ಕೇಶ ಮುಂಡನೆ ಹಾಗೂ ಮಹಿಳೆಯರು ಕಟ್ಟಿಗೆ ಹೊತ್ತು ಪ್ರತಿಭಟಿಸಿದರು.

ಪಟ್ಟಣದ ಅಂಬೇಡ್ಕರ್ ಸರ್ಕಲ್ ಮೂಲಕ ವೀರಭದ್ರಪ್ಪ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಈ ವೇಳೆ ತಹಸೀಲ್ದಾರ್ ಎಚ್. ಪ್ರಾಣೇಶ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಂಜಾರ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಕುಲ ಕಸುಬು ಕಟ್ಟಿಗೆ ಮಾರುವ ಮೂಲಕ ಪ್ರತಿಭಟಿಸಿದರೆ, ಯುವಕರು ಕೇಶ ಮುಂಡನೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಸರ್ಕಾರ ಒಳಮೀಸಲಾತಿ ವರ್ಗೀಕರಣವನ್ನು ನೈಜತೆಯ ಆಧಾರದ ಮೇಲೆ ಮಾಡಿಲ್ಲ. ಇದು ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ. ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ ಹೇಳಿದರು.

ನ್ಯಾ. ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆ ವೇಳೆ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು. ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ ಎಂದ ಅವರು, ಈ ಸಮೀಕ್ಷೆ ಮಾಡುವ ವೇಳೆ ಉಪಜಾತಿ ಕಾಲಂನಲ್ಲಿ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯಗಳ ಜಾತಿಯನ್ನು ಸರಿಯಾಗಿ ನಮೂದಿಸಿಲ್ಲ. ಕೊಲಂಬೋ ವಾಸಿಸುವ ಕೆಲವೊಂದು ಕಡೆ ಆದಿ ಆಂಧ್ರ, ಆದಿ ದ್ರಾವಿಡ್‌, ಆದಿ ಕರ್ನಾಟಕ ಎಂದು ತಪ್ಪಾಗಿ ನಮೂದಿಸಲಾಗಿದೆ. ಹೀಗೆ ವಿವಿಧ ರೀತಿಯ ಧೋರಣೆಗಳಿಂದ ಈ ಸಮೀಕ್ಷೆಯಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ ಮಾತನಾಡಿ, ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ ಕೈ ಬಿಡಬೇಕು. ಸಚಿವ ಸಂಪುಟದ ಒಳಮೀಸಲಾತಿಯ ವರ್ಗೀಕರಣದ ಕರಡು ಅಧಿಸೂಚನೆ ಹಿಂತೆಗೆದುಕೊಳ್ಳಬೇಕು. ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಾಪಾಲು ನೀಡುವ ಮೂಲಕ ಬಂಜಾರ, ಕೊರಮ, ಕೊರಚ, ಭೋಮಿ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಪ್ರಮಾಣ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಮೇಘರಾಜ್ ಬಳಗೇರಿ, ಬಸವರಾಜ ನಾಯಕ , ಜೀತು ನಾಯ್ಕ್‌, ಹಂಪಣ್ಣ ಕಟ್ಟಿಮನಿ, ಯಲ್ಲಪ್ಪ ಕಾರಭಾರಿ, ಯಮನೂರಪ್ಪ ಭಾನಾಪುರ, ಪರಸಪ್ಪ ಕಾರಭಾರಿ, ತುಕಾರಂ ಹೊನ್ನುಂಚಿ, ಸೋಮಪ್ಪ ಚಿಕೇನಕೊಪ್ಪ, ಕಳಕೇಶ ನಾಯಕ, ದೇವವ್ವ ಕಟ್ಟಿಮನಿ, ಶಿವವ್ವ ಭಾನಾಪುರ, ಲಕ್ಷ್ಮವ್ವ ಬಳಗೇರಿ, ಸೋನವ್ವ ಚಿಕೇನಕೊಪ್ಪ ಇತರರಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು