ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಂಪನಿಗಳು, ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಬೇಕಿದೆ ಎಂದು ವಿಯಾವಿ ಸಂಸ್ಥೆ ಆಡಳಿತಾಧಿಕಾರಿ ಸ್ವರ್ಣ ಅನೂಪ್ ತಿಳಿಸಿದರು.ತಾಲೂಕಿನ ಪಂಚೇಗೌಡನದೊಡ್ಡಿಯಲ್ಲಿ ಬೆಂಗಳೂರಿನ ವಿಯಾವಿ ಸಂಸ್ಥೆ, ಮಂಗಲದ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಅಂಗನವಾಡಿ ಕೇಂದ್ರಕ್ಕೆ 25 ಸಾವಿರ ರು. ಮೌಲ್ಯದ ಮೇಜು, ಕುರ್ಚಿಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರವನ್ನೇ ಕಾಯದೇ ಖಾಸಗಿ ಕಂಪನಿಗಳು, ಸ್ವಯಂಸೇವಾ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅಗತ್ಯ ನೆರವು ನೀಡಬೇಕು ಎಂದರು.ಶಾಲಾ ಪೂರ್ವ ಶಿಕ್ಷಣ ಕಲಿಯುಲು ಮಕ್ಕಳಿಗೆ ಆಕರ್ಷಣೀಯವಾಗಿ ಅಂಗನವಾಡಿ ಕೇಂದ್ರವಿದ್ದರೆ ಕಲಿಕೆಗೆ ಸಹಕಾರಿಯಾಗಲಿದೆ. ಇದನ್ನು ಅರಿತು ಅಗತ್ಯ ಸಲಕರಣೆಗಳನ್ನು ಈ ಕೇಂದ್ರಕ್ಕೆ ನೀಡಲಾಗಿದೆ ಎಂದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕಾರ್ಪೋರೇಟ್ ಕಂಪನಿಗಳು ಮಕ್ಕಳ ಕಲಿಕೆಗಾಗಿ ಪಠ್ಯಕ್ಕೆ ಪೂರಕವಾದ ಸಲಕರಣೆಗಳು, ಲೇಖನ ಸಾಮಗ್ರಿಗಳು ಹಾಗೂ ಅಗತ್ಯತೆ ಇರುವ ಸಲಕರಣೆಗಳನ್ನು ಶಾಲೆಗೆ ನೀಡುತ್ತಾ ಬಂದಿವೆ ಎಂದು ಶ್ಲಾಘಿಸಿದರು.ಪ್ರಸಕ್ತ ವರ್ಷ ವಿ.ಸಿ.ಫಾರ್ಮ್ ಪ್ರೌಢಶಾಲೆ 56 ಸಾವಿರ ವೆಚ್ಚದ ನೋಟ್ ಬುಕ್ , ಕರಡಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 56 ಸಾವಿರ ರು. ವೆಚ್ಚದ ಮೊಬೈಲ್ ಕಂಪ್ಯೂಟರ್ ಸಿಸ್ಟಂ, ವರುಣಾ ವಿಧಾನ ಸಭಾ ಕ್ಷೇತ್ರದ ಸೋಮೇಶ್ವರಪುರ ಗ್ರಾಮದ ಶಾಲೆಗೆ 25 ಸಾವಿರ ರು. ವೆಚ್ಚದ ಬ್ಯಾಂಡ್‌ಸೆಟ್ ವಿತರಿಸಲಾಗಿದೆ ಎಂದರು.
ಈ ವೇಳೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಪಂಚಲಿಂಗೇಗೌಡ, ಗ್ರಾಪಂ ಸದಸ್ಯೆ ಪುಷ್ಪಾ, ಅಂಗನವಾಡಿ ಕಾರ್‍ಯಕರ್ತೆ ಅಮರಭಾರತಿ, ಸರ್ಕಾರಿ ಕಿರಿಯ ಶಾಲೆ ಮುಖ್ಯಶಿಕ್ಷಕಿ ಚಿನ್ನಮ್ಮ, ಪರಿಸರ ಸಂಸ್ಥೆ ಕಾರ್‍ಯದರ್ಶಿ ಕೆ.ಪಿ.ಅರುಣಕುಮಾರಿ ಇದ್ದರು.