ಕನ್ನಡಪ್ರಭ ವಾರ್ತೆ ಅಫಜಲ್ಪುರ
ಇಲ್ಲಿನ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಗಜಾನನ ಬಾಳೆ ಅವರು ಗ್ರಾಮಿಣ ಮಟ್ಟದ ಗ್ರಂಥಾಲಯ ಉನ್ನತೀಕರಣಕ್ಕಾಗಿ ನನ್ನ ಜನ ನನ್ನ ಋಣ ಎಂಬ ವಿಶೇಷ ಅಭಿಯಾನ ಆರಂಬಿಸಿದ್ದು, ತಾಲೂಕಿನಲ್ಲಿ ಈ ಅಭಿಯಾನಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ.
ತಾಲೂಕಿನ ಬಳೂರ್ಗಿ, ಮಾಶಾಳ, ಕರಜಗಿ, ಚೌಡಾಪುರ ಪಂಚಾಯ್ತಿಗಳ ಗ್ರಂಥಾಲಯಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಅಭಿಯಾನಕ್ಕೆ ದಾನಿಗಳಿಂದ ಸಂಗ್ರಹಿಸಿದ ದೆಣಿಗೆಯ ಹಣವನ್ನು ಬಳಸಿಕೊಂಡು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಿ ಗ್ರಾಮಗಳಿಗೆ ಅನುಕೂಲ ಮಾಡಿಕೊಡುವ ಕೆಲಸ ಈ ಅಭಿಯಾನದ ವಿಶೇಷತೆಯಾಗಿದೆ.
ಆಯ್ಕೆಯಾದ ಗ್ರಾಮ ಪಂಚಾಯ್ತಿಗಳಲ್ಲಿ ರೈತರನ್ನು ಹೊರತುಪಡಿಸಿ ವ್ಯಾಪಾರಿಗಳು, ಉದ್ಯಮಿಗಳು, ಸರ್ಕಾರಿ ನೌಕರರಿಗೆ ಮಾತ್ರ ದೇಣಿಗೆ ಕೇಳಿ ಪಡೆಯುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಾಶಾಳ ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವು ಪ್ಯಾಟಿ ಮಾಹಿತಿ ನೀಡಿ, ನಮ್ಮ ಗ್ರಾಮದಲ್ಲಿ ಗ್ರಂಥಾಲಯ ಉನ್ನತೀಕರಣಕ್ಕಾಗಿ ನಾವು ಎರಡುವರೆ ಲಕ್ಷ ದೇಣಿಗೆ ಸಂಗ್ರಹಿಸಿದ್ದೇವೆ.
ಇನ್ನೂ ₹10 ಲಕ್ಷ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಗ್ರಾಮ ಪಂಚಾಯ್ತಿ ಎಲ್ಲಾ ಸದ್ಯಸರು, ಪಿಡಿಓ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದೇವೆ. ಜನರು ನಮಗೆ ಸರಿಯಾಗಿ ಸ್ಪಂದನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾಲೂಕಿನ ಕರಜಗಿ ಗ್ರಾಮ ಪಂಚಾಯ್ತಿಯಲ್ಲಿ ಅಭಿಯಾನಕ್ಕೆ ಗ್ರಾಮಸ್ಥರ ಕಡೆಯಿಂದ ₹52 ಸಾವಿರ ದೇಣಿಗೆ ಸಂಗ್ರಹಿಸಿದ್ದೇವೆ. ಇನ್ನಷ್ಟು ದಾನಿಗಳು ಕೈ ಜೊಡಿಸಬೇಕು ಎಂದು ಪಿಡಿಓ ಚಂದ್ರಶೇಖರ ಕುಂಬಾರ ಹೇಳಿದರು.
ತಾಲೂಕಿನ ಬಳೂರ್ಗಿಯಲ್ಲಿ ಗ್ರಂಥಾಲಯ ಉನ್ನತೀಕರಣಕ್ಕಾಗಿ ವಿಶೇಷ ಅಭಿಯಾನ ಮಾಡಿದ್ದೇವೆ. ದಾನಿಗಳು ಮುಂದೆ ಬಂದು ಧನ ಸಹಾಯ ಮಾಡಬೇಕು. ಕೆಲವರು ದೇಣಿಗೆ ನೀಡಿದ್ದಾರೆ ಎಂದು ಅಬಿವೃದ್ಧಿ ಅದಿಕಾರಿ ಮಹಾತೆಂಶ ಸಾಲಿಮಠ ಹೇಳಿದರು.
ಮಾಶಾಳ ಗ್ರಾಮದಲ್ಲಿ ಜನರಿಂದ ನಿರಿಕ್ಷೆಗೂ ಮೀರಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಅಲ್ಲಿ ₹10 ಲಕ್ಷವರಗೆ ಗುರಿ ತಲುಪುವ ಭರವಸೆ ಇದೆ ಎಂದು ಮಾಶಾಳ ಪಿಡಿಒ ನಿಂಗಪ್ಪ ಹೇಳಿದರು.