ಬಸವರಾಜ ಹಿರೇಮಠ
ತಾಂತ್ರಿಕ ಕಾರಣಗಳೊಂದಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಐದು ವರ್ಷಗಳ ಇಡೀ ಒಂದು ಅವಧಿ ಕಾಲ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗೆ ಸದಸ್ಯರುಗಳಿಲ್ಲದೇ ಆಡಳಿತ ನಡೆದು ಹೋಯ್ತು. ತಡವಾದರೂ ಇದೀಗ ಈ ಎರಡು ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುವ ಮೊದಲ ಭಾಗವಾಗಿ ಮೀಸಲಾತಿಯನ್ನು ಸರ್ಕಾರ ಘೋಷಿಸಿದೆ.
ಈ ಮೊದಲು 2016ರ ಜನವರಿ ತಿಂಗಳಲ್ಲಿ ನಡೆದಿದ್ದ ಜಿಪಂ, ತಾಪಂ ಚುನಾವಣೆಯ ಫಲವಾಗಿ ಅದೇ ವರ್ಷದ ಮೇ 4ರಂದು ಸದಸ್ಯರು ಅಧಿಕಾರ ಸ್ವೀಕರಿಸಿದ್ದರು. ಐದು ವರ್ಷಗಳ ಆಡಳಿತದ ನಂತರ 2021ರ ಮೇ 4ರಂದು ಈ ಸದಸ್ಯರ ಅಧಿಕಾರಾವಧಿ ಮುಗಿದಿತ್ತು. ಬಳಿಕ ಕ್ಷೇತ್ರ ಮರುವಿಂಗಡನೆ ಮಾಡಿ ರಾಜ್ಯ ಸರ್ಕಾರ ಈ ಮೊದಲು ಮೀಸಲಾತಿ ಪ್ರಕಟಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣ ಸರ್ಕಾರ ಚುನಾವಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ್ ಇಲಾಖೆಯು ಪರಿಷ್ಕೃತ ಮೀಸಲಾತಿ ಅಧಿಸೂಚನೆ ಹೊರಟಿಸಿದ್ದು, ಬರೋಬ್ಬರಿ ಹತ್ತು ವರ್ಷಗಳ ಬಳಿಕ ಈ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮೊದಲ ಹಂತದ ಸಿದ್ಧತೆಗಳು ಶುರುವಾಗಿವೆ.ಗರಿಗೆದರಿದ ರಾಜಕೀಯ:
ಇಷ್ಟು ವರ್ಷಗಳ ಕಾಲ ತಡವಾಗಿದ್ದರಿಂದ ಬೇಸತ್ತ ಗ್ರಾಮೀಣ ರಾಜಕೀಯ ಮುಖಂಡರು ಇದೀಗ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಪಕ್ಷದ ಮುಖಂಡರು ಬಾಗಿಲು ಕಾಯುವ ಸ್ಥಿತಿ ಉಂಟಾಗಿದೆ. ತಮ್ಮ ಕ್ಷೇತ್ರದ ಶಾಸಕರು, ಮಾಜಿ ಶಾಸಕರನ್ನು ಭೇಟಿಯಾಗಿ ತಮಗೆ ಬೇಕಾದ ಕ್ಷೇತ್ರಕ್ಕೆ ಟಿಕೆಟ್ ಕೊಡಬೇಕೆಂಬ ದುಂಬಾಲು ಬೀಳುವ ಸ್ಥಿತಿ ಉಂಟಾಗಿದೆ.
ಪ್ರಸ್ತುತ ಪ್ರಕಟಿಸಿರುವ ಜಿಪಂ, ತಾಪಂ ಚುನಾವಣೆಯ ಮೀಸಲಾತಿ ಗಮನಿಸಿದರೆ, ಬಹುತೇಕ ಶೇ.50ರಷ್ಟು ಮೀಸಲಾತಿ ಇದೆ. ಹೀಗಾಗಿ ಜಿಪಂ, ತಾಪಂಗಳು ಮಹಿಳೆಯರ ಆಡಳಿತ ಕೇಂದ್ರವಾಗುವುದರಲ್ಲಿ ಸಂಶಯವೇ ಇಲ್ಲ. ಧಾರವಾಡ ಜಿಲ್ಲೆಯಲ್ಲಿ 28 ಜಿಪಂ ಕ್ಷೇತ್ರಗಳಿದ್ದು ಈ ಪೈಕಿ 14 ಅಂದರೆ ಶೇ.50ರಷ್ಟು ಮಹಿಳೆಯರಿಗೆ ಮೀಸಲು ಇದೆ. ಹಾಗೆಯೇ, ಜಿಲ್ಲೆಯ ಏಳು ತಾಲೂಕುಗಳಲ್ಲಿ 89 ತಾಪಂ ಕ್ಷೇತ್ರಗಳಿದ್ದು ಪೈಕಿ 47 ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿ ನೀಡಿದ್ದು ಶೇ. 52ರಷ್ಟಾಯಿತು. ಈ ಹಿನ್ನೆಲೆಯಲ್ಲಿ ಈ ಸ್ಥಳೀಯ ಸಂಸ್ಥೆಗಳ ರಾಜಕೀಯದ ಚುಕ್ಕಾಣಿ ಮಹಿಳೆಯರ ಕೈಗೆ ಸಿಗುವುದು ಪಕ್ಕಾ ಎನ್ನಿಸಿದೆ.ಜಿಪಂ ಹಾಗೂ ತಾಪಂ ಚುನಾವಣೆ ಮಾಡಬೇಕೆಂದು ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೇವು. ಇದರೊಂದಿಗೆ ಗ್ರಾಮ ಪಂಚಾಯ್ತಿಗೂ ಮೀಸಲಾತಿ ಪ್ರಕಟಿಸಿ ಆರೇಳು ತಿಂಗಳಾಗಿದೆ. ಐದು ವರ್ಷಗಳ ಕಾಲ ಸ್ಥಳೀಯವಾಗಿ ಜನಪ್ರತಿನಿಧಿಗಳಿಲ್ಲದೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಜನಪ್ರತಿನಿಧಿಗಳು ಇಲ್ಲದೇ ಇರುವುದನ್ನು ಲಾಭವಾಗಿಸಿಕೊಂಂಡು ಈ ಅವಧಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿತ್ತು. ಈಗ ಜಿಪಂ, ತಾಪಂ, ಗ್ರಾಂಪ ಮೀಸಲಾತಿ ಪ್ರಕಟಿಸಿದ್ದು, ಈ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ಘೋಷಣೆ ಮಾಡಬೇಕು.