ಗೃಹಲಕ್ಷ್ಮೀ ಕಂತಿಗೆ ಮರುಪರಿಶೀಲನೆಯ ಕಂಟಕ

KannadaprabhaNewsNetwork |  
Published : Oct 10, 2026, 02:30 AM IST
ಗೃಹಲಕ್ಷ್ಮಿ | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 66,602 ಫಲಾನುಭವಿಗಳಿದ್ದು, ಜೂನ್ ತಿಂಗಳ ಕಂತು 62,482 ಮಂದಿಗೆ ಜಮೆಯಾಗಿದೆ. 4,120 ಫಲಾನುಭವಿಗಳಿಗೆ ಕಳೆದ ಕಂತಿನ ಹಣ ಬರಬೇಕಿದೆ. ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಹಣದ ನಿರೀಕ್ಷೆಯಲ್ಲಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ದಸರಾ ಹಬ್ಬದ ಸಿದ್ಧತೆಯಲ್ಲಿ ಕುಟುಂಬಗಳು ತೊಡಗಿರುವ ಹೊತ್ತಲ್ಲೇ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಕಣ್ಣು ಬ್ಯಾಂಕ್ ಖಾತೆಯತ್ತ ನೆಟ್ಟಿದೆ.

ಜೂನ್ ಬಳಿಕ ಕಂತಿನ ಹಣ ಬಾರದಿರುವುದರಿಂದ ಮಹಿಳೆಯರ ಲೆಕ್ಕಾಚಾರದಲ್ಲಿ ₹6 ಸಾವಿರದ ಕೊರತೆ ಎದುರಾಗಿದೆ.

ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 66,602 ಫಲಾನುಭವಿಗಳಿದ್ದು, ಜೂನ್ ತಿಂಗಳ ಕಂತು 62,482 ಮಂದಿಗೆ ಜಮೆಯಾಗಿದೆ. 4,120 ಫಲಾನುಭವಿಗಳಿಗೆ ಕಳೆದ ಕಂತಿನ ಹಣ ಬರಬೇಕಿದೆ. ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಮೂರು ಕಂತುಗಳು ಜಮೆಯಾಗಬೇಕಿದ್ದು, ಒಟ್ಟು ₹6 ಸಾವಿರಕ್ಕಾಗಿ ಫಲಾನುಭವಿಗಳು ಎದುರು ನೋಡುತ್ತಿದ್ದಾರೆ.

ಜೂನ್ ತಿಂಗಳ ಕಂತಿನ ಹಣವನ್ನು ಆ. 19ರಂದು ಜಮೆ ಮಾಡಲಾಗಿದ್ದು, ಬಳಿಕದ ಮೂರು ತಿಂಗಳ ಪಾವತಿ ಆಗಿಲ್ಲ. ದಸರಾ ಹಬ್ಬದ ಖರೀದಿ ಸಂದರ್ಭದಲ್ಲಿ ಮಕ್ಕಳ ಬಟ್ಟೆ, ದಿನಸಿ ಹಾಗೂ ಮನೆಯ ಅಗತ್ಯ ವೆಚ್ಚಗಳಿಗೆ ಈ ಹಣ ನೆರವಾಗಲಿದೆ ಎಂಬ ನಿರೀಕ್ಷೆ ಮಹಿಳೆಯರಲ್ಲಿದೆ.

ಮರುಪರಿಶೀಲನೆಯಿಂದ ಗೊಂದಲ: ಫಲಾನುಭವಿಗಳ ಅರ್ಹತೆ ಕುರಿತು ಮರುಪರಿಶೀಲನೆ ನಡೆಯಲಿದ್ದು, ಈ ಪ್ರಕ್ರಿಯೆಯಿಂದ ಹಣ ಪಾವತಿ ವಿಳಂಬವಾಗುತ್ತಿದೆಯೇ ಎಂಬ ಅನುಮಾನ ಫಲಾನುಭವಿಗಳಲ್ಲಿದೆ. ಪರಿಷ್ಕರಣಾ ಕಾರ್ಯಕ್ಕೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದರೂ, ಪರಿಶೀಲನೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಯಾರು ಅರ್ಹರು, ಯಾರು ಅನರ್ಹರು ಎಂಬುದು ಸದ್ಯ ಸ್ಪಷ್ಟವಾಗಿಲ್ಲ.

ಇದರ ನಡುವೆ 710 ಫಲಾನುಭವಿಗಳ ಹಣ ಆಧಾರ್, ಬ್ಯಾಂಕ್ ಖಾತೆ ಹಾಗೂ ಡಿಬಿಟಿ, ಜಿಎಸ್‌ಟಿ ಸಮಸ್ಯೆಯಿಂದ ಬಾಕಿಯಾಗಿದೆ. ಅರ್ಹ ಫಲಾನುಭವಿಗಳ ಪಾವತಿಗೆ ಪರಿಶೀಲನಾ ಪ್ರಕ್ರಿಯೆ ಅಡ್ಡಿಯಾಗದಂತೆ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಹಣದ ನಿರೀಕ್ಷೆಯಲ್ಲಿರುವ ಮಹಿಳೆಯರು ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂದೇಶಗಳನ್ನು ಆಗಾಗ ಪರಿಶೀಲಿಸುತ್ತಿದ್ದಾರೆ. ಹಬ್ಬ ಸಮೀಪಿಸುತ್ತಿರುವಂತೆ ಬಾಕಿ ಕಂತಿನ ನಿರೀಕ್ಷೆ ಹೆಚ್ಚಾಗಿದ್ದು, ದಸರಾ ಹೊಸ್ತಿಲಲ್ಲಿ ಮೂರು ತಿಂಗಳ ಬಾಕಿ ಕಂತಿನ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕು. ಅರ್ಹ ಫಲಾನುಭವಿಗಳ ಖಾತೆಗೆ ಹಣ ತ್ವರಿತವಾಗಿ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಕುಷ್ಟಗಿ ಪಟ್ಟಣದ ಕಲಾವತಿ. ಯೋಜನೆ ಹಣ ತಲುಪಿಸಲು ಕ್ರಮ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮಾಹಿತಿಯ ಪರಿಶೀಲನೆ ಹಾಗೂ ಅಗತ್ಯ ತಿದ್ದುಪಡಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮೇಲಧಿಕಾರಿಗಳಿಂದ ಸೂಚನೆ ಬಂದ ನಂತರ ನಿಯಮಾನುಸಾರ ಪರಿಶೀಲನಾ ಕಾರ್ಯ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಹಣ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಕುಷ್ಟಗಿ ಸಿಡಿಪಿಒ ಕಚೇರಿ ಕೇಸ್ ವರ್ಕರ್ ಅನ್ನಪೂರ್ಣಾ ಪಾಟೀಲ್ ಹೇಳಿದರು. ಜಮೆಯಾಗಲಿದೆ: ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮರುಪರಿಶೀಲನೆಯಿಂದ ಅರ್ಹರಿಗೆ ಅನಗತ್ಯ ತೊಂದರೆಯಾಗದಂತೆ ಸರ್ಕಾರದ ಗಮನಕ್ಕೆ ತರಲಾಗುವುದು. ಇಲ್ಲಿಯವರೆಗೆ ಒಟ್ಟು 32 ಕಂತುಗಳು ಜಮೆಯಾಗಿದ್ದು, ಜುಲೈ ತಿಂಗಳ ಕಂತು ಎರಡು ಮೂರು ದಿನಗಳ ಒಳಗಾಗಿ ಜಮೆಯಾಗಲಿದೆ ಎಂದು ಕುಷ್ಟಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡ್ಕೂರು ಗ್ರಾಮಕ್ಕೆ ಕರ್ಣನಂತಿದ್ದ ನಾನಾ ಪಾಟೆಕರ್ !
12ರಂದು ಉಡುಪಿ-ಉಚ್ಚಿಲ ದಸರಾಕ್ಕೆ ಸಿಎಂ ಭೇಟಿ