ಸಿಕ್ಕ ಅಕ್ರಮ ಮರಳು ಎಷ್ಟೆಂದು ಸ್ಪಷ್ಟಪಡಿಸದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು; ಸಾರ್ವಜನಿಕರ ಆಕ್ರೋಶಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಗಜೇಂದ್ರಗಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲದ ಪರಿಣಾಮ ರೈತರು ಮಳೆಯಾಶ್ರಿತ ಕೃಷಿ ಚಟುವಟಿಕೆ ನೆಚ್ಚಿಕೊಂಡಿದ್ದಾರೆ. ಇನ್ನೂ ತಾಲೂಕಿನ ಕೆಲವು ಗ್ರಾಮಗಳಲ್ಲಿನ ರೈತರು ಕೆರೆಗಳಲ್ಲಿನ ನೀರಿ ಅವಲಂಬಿಸಿ ಕೃಷಿ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಸೃಷ್ಟಿಯಾದ ಬರವನ್ನೇ ಬಂಡವಾಳ ಮಾಡಿಕೊಂಡ ಕೆಲ ಮರಳು ದಂಧೆಕೋರರು ಬೆಣಚಮಟ್ಟಿ ಕೆರೆಯಲ್ಲಿನ ಮಣ್ಣನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆಗೆ ಮುಂದಾಗಿ ಮನಸೋ ಇಚ್ಚೆ ಕೆರೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಮಣ್ಣನ್ನು ಸಂಗ್ರಹ ಮಾಡಿದ್ದರು. ಮಾಹಿತಿ ತಿಳಿದ ದಾಳಿ ಮಾಡಿದ ಅಧಿಕಾರಿಗಳು ಗಣಿ ಮತ್ತು ಭು ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆಗ ಸ್ಥಳದಲ್ಲಿದ್ದ ಅಂದಾಜು ೬ ಟಿಪ್ಪರ್ ಮರಳನ್ನು ಪಟ್ಟಣದ ಪ್ರವಾಸಿ ಮಂದಿರಕ್ಕೆ ಸಾಗಿಸಿದರು. ಮರುದಿನ ಉಳಿದ ಮರಳನ್ನು ಅಂದಾಜಿಸುವ ಕೆಲಸ ಮಾಡುವ ಜತೆಗೆ ನಿಖರವಾದ ಮಾಹಿತಿ ನೀಡುವುದಾಗಿ ತಿಳಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ.
ಕೆರೆಯಲ್ಲಿ ಸಿಕ್ಕಿರುವ ಅಕ್ರಮ ಮರಳು ಅಂದಾಜು ₹೧ ಲಕ್ಷ ೬೫ ಸಾವಿರ ಮೊತ್ತದ್ದು ಎಂದು ಹೇಳುವುದರ ಜತೆಗೆ ಈಗಾಗಲೇ ಅದನ್ನು ಟೆಂಡರ್ ನೀಡಿದ್ದಾರೆ ಎಂಬ ಚರ್ಚೆ ಸಹ ಕೇಳಿ ಬರುತ್ತಿವೆ. ಆದರೆ ಅಕ್ರಮ ಮರಳುಗಾರಿಕೆ ಮಾಡುವ ಸ್ಥಳದಲ್ಲಿ ದಾಳಿ ಮಾಡಿದ ಬಳಿಕ ಸಿಕ್ಕ ಪ್ರಮಾಣದ ಮರಳು ಎಷ್ಟು ಎಂದು ಹೇಳಲು ಇಲಾಖೆ ಅಧಿಕಾರಿಗಳು ಏಕೆ ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತಾಲೂಕಿನ ಬೆಣಚಮಟ್ಟಿ ಕೆರೆಯಲ್ಲಿ ಸಿಕ್ಕಿರುವ ಅಕ್ರಮ ಮರಳು ಎಷ್ಟು, ಯಾರ ಮೇಲೆ ಪ್ರಕರಣಗಳನ್ನು ಅಧಿಕಾರಿಗಳು ದಾಖಲಿಸಿದ್ದಾರೆ ಹಾಗೂ ಸಿಕ್ಕಿರುವ ಮರಳು ಯಾವ ಆಧಾರದ ಮೇಲೆ ಯಾರಿಗೆ ಟೆಂಡರ್ ಕೊಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ತಾಲೂಕಿನ ಬೆಣಚಮಟ್ಟಿ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಮರಳು ಹಾಗೂ ಮಣ್ಣು ಸಿಕ್ಕಿದ್ದು ಅಕ್ರಮದಲ್ಲಿ ಭಾಗವಹಿಸಿದವರ ಪತ್ತೆ ಕಾರ್ಯ ನಡೆಯುತ್ತಿದೆ. ಮುಂದಿನ ಕ್ರಮದವರೆಗೆ ಪೊಲೀಸರನ್ನು ಸ್ಥಳದಲ್ಲಿಯೇ ನಿಯೋಜಿಸಲಾಗಿದೆ.
ಅಶೋಕ ವನ್ನಾಲ
ಎಂ.ಎಸ್. ಹಡಪದ