)
ಚಂದ್ರು ಕೊಂಚಿಗೇರಿ
500 ಅಡಿ ಕೊಳವೆ ಬಾವಿ ಕೊರೆದರೂ ಹನಿ ನೀರು ಬರುತ್ತಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿಗೆ ಭಾರೀ ಹಾಹಾಕಾರ ಎದುರಾಗು ಎಲ್ಲ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.
ತಾಲೂಕಿನಲ್ಲಿ 11 ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿದ್ದು, ಇದರಲ್ಲಿ ಹೊಳಗುಂದಿ-ಉತ್ತಂಗಿ ಕುಡಿವ ನೀರಿನ ಯೋಜನೆ ಪೈಪ್‌ಲೈನ್ ಹಾಗೂ ಇತರೆ ಸಮಸ್ಯೆಯಿಂದ ಸಂಪೂರ್ಣ ಬಂದ್ ಆಗಿದೆ. ಉಳಿದಂತೆ 10 ಯೋಜನೆಗಳಿಂದ ನೀರು ಪೊರೈಕೆಯಾಗುತ್ತಿದೆ. ಸದ್ಯದ ಮಟ್ಟಿಗೆ ತುಂಗಭದ್ರಾ ನದಿಯಲ್ಲಿನ ನೀರು 3 ತಿಂಗಳಿಗೆ ಆಗುವಷ್ಟು ಇದೆ.ಬರದ ಹಿನ್ನೆಲೆ 34 ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದೆ. ಈಗಾಗಲೇ ಕೆಲ ಹಳ್ಳಿಗಳಲ್ಲಿ ರೈತರ ಕೊಳವೆ ಬಾವಿ ಬಾಡಿಗೆ ಪಡೆಯಲಾಗಿದೆ. ಇದರಲ್ಲಿ ದಾಸರಹಳ್ಳಿ ತಾಂಡಾ -4, ತಳಕಲ್ಲು-2, ಮಾನ್ಯರ ಮಸಲವಾಡ, ಅಂಕ್ಲಿ, ಭಾನ್ಯೇನ ತಾಂಡಾ, ವರಕನಹಳ್ಳಿ, ಸೋವೇನಹಳ್ಳಿ, ಕಾಗನೂರು ಗ್ರಾಮಗಳಲ್ಲಿ ತಲಾ ಒಂದು ಕೊಳವೆ ಬಾವಿ ಬಾಡಿಗೆ ಪಡೆದು ಜನರಿಗೆ ನೀರು ಪೂರೈಕೆಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಕ್ರಮ ಕೈಗೊಂಡಿದೆ.
ಬಾಡಿಗೆ ಕೊಳವೆ ಬಾವಿ ಇಲ್ಲ: ಇಟ್ಟಿಗಿ ಹೋಬಳಿ ವ್ಯಾಪ್ತಿಯ ಕಲ್ಲಳ್ಳಿ, ಅಡವಿಮಲ್ಲನಕೇರಿ ತಾಂಡಾ, ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಈ ಊರುಗಳಲ್ಲಿ ರೈತರ ಕೊಳವೆ ಬಾವಿಗಳೇ ಬಾಡಿಗೆಗೆ ಸಿಗುತ್ತಿಲ್ಲ, ಕಾರಣ ಅಂತರ್ಜಲ ಕುಸಿತದಿಂದ ಬಹುತೇಕ ರೈತರ ಕೊಳವೆ ಬಾವಿಗಳೇ ನೀರಿಲ್ಲದೇ ಬತ್ತಿ ಹೋಗಿವೆ.
34 ಸಮಸ್ಯಾತ್ಮಕ ಹಳ್ಳಿ: ತಾಲೂಕಿನ ಹೊಳಗುಂದಿ-ಉತ್ತಂಗಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಹೊರತು ಪಡಿಸಿ ಉಳಿದ 10 ಯೋಜನೆಯಿಂದ ನೀರು ಪೂರೈಕೆ ಇದೆ. 34 ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಿದ್ದು, ಕೆಲವು ಕಡೆ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರದೀಪ್ ಕುಮಾರ ಕಟಗಿ ತಿಳಿಸಿದರು.