25 ವರ್ಷದ ಬಳಿಕ ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ಭೂಮಿಪೂಜೆ: ಕಣವಿ

KannadaprabhaNewsNetwork |  
Published : Nov 04, 2023, 12:30 AM IST
3ಕೆಪಿಎಲ್21 ಕೊಪ್ಪಳ ಪ್ರವಾಸಿಮಂದಿರದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ನ್ಯಾಯಾಲಯ ಮೆಟ್ಟಿಲು ಏರಿದ ಬಳಿಕವೇ ಭೂ ಮಂಜೂರಾತಿ ಹಣ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಿಂದ ಭೂಮಿ ಪೂಜೆ । ₹100 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಯೋಜನೆ

ಕೊಪ್ಪಳ: ರಾಜ್ಯಾದ್ಯಂತ ನೂತನ ಎಲ್ಲ ಜಿಲ್ಲೆಯಲ್ಲೂ ಜಿಲ್ಲಾ ನ್ಯಾಯಾಲಯ ನಿರ್ಮಾಣವಾಗಿದ್ದರೂ ಕೊಪ್ಪಳದಲ್ಲಿ ನಿರ್ಮಾಣವಾಗಿರಲಿಲ್ಲ. ಈಗ 25 ವರ್ಷಗಳ ನಂತರ ಕೊನೆಗೂ ಭೂಮಿ ಸ್ವಾಧೀನವಾಗಿ ಭೂಮಿಪೂಜೆಯನ್ನು ನ.4ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ ಬಿ. ವರಲೆ ಅವರಿಂದ ನೆರವೇರಿಸಲಾಗುತ್ತಿದೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಹೇಳಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಅವಿರತ ಹೋರಾಟದ ಫಲವಾಗಿ ಕೊನೆಗೂ ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ಭೂಮಿ ಪೂಜೆಯಾಗುತ್ತಿದೆ ಎಂದರು.

ಕುಷ್ಟಗಿ ರಸ್ತೆಯಲ್ಲಿರುವ 11 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೂ ಸರ್ಕಾರ ಮೀನಮೇಷ ಎಣಿಸುತ್ತಿರುವ ವೇಳೆಯಲ್ಲಿ ಹೈಕೋರ್ಟ್ ಮೊರೆ ಹೋಗಿ, ಹಣ ಬಿಡುಗಡೆಗೆ ಸೂಚಿಸಿದ ಮೇಲೆಯೇ ₹9 ಕೋಟಿ ಬಿಡುಗಡೆಯಾಗಿ, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ.

ಇಲ್ಲಿ 25 ವರ್ಷಗಳ ನಂತರವಾದರೂ ಜಿಲ್ಲಾ ನ್ಯಾಯಾಲಯಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದು ಸಂತಸದ ವಿಷಯ. ಆದರೆ, ಕಟ್ಟಡ ನಿರ್ಮಾಣಕ್ಕೆ ಇನ್ನು ಹಣಕಾಸಿನ ನೆರವನ್ನು ರಾಜ್ಯ ಸರ್ಕಾರ ನೀಡಿಲ್ಲ. ಸುಮಾರು ₹100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಗೃಹ ನಿರ್ಮಾಣ ಮಾಡಲಾಗುತ್ತದೆ.

ಜಿಲ್ಲಾ ನ್ಯಾಯಾಲಯದಲ್ಲಿ ಸುಮಾರು 15 ವಿವಿಧ ನ್ಯಾಯಾಲಯಗಳ ಹಾಲ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಗ್ರಂಥಾಲಯ, ಸಾಕ್ಷಿದಾರರ ಮೊಗಸಾಲೆ, ಮಹಿಳಾ, ಪುರುಷ ವಕೀಲರಿಗೆ ಪ್ರತ್ಯೇಕ ವಿಶ್ರಾಂತಿಗೃಹ, ನ್ಯಾಯವಾದಿಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕಟ್ಟಡ ಜಿ+3 ಆಗಿದ್ದು, ಸುಸಜ್ಜಿತವಾಗಿರುತ್ತದೆ. ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ 6 ಎಕರೆ ಭೂಮಿಯನ್ನು ಕಾಯ್ದಿರಿಸಲಾಗುತ್ತದೆ ಎಂದರು.

ರಾಜ್ಯಾದ್ಯಂತ ನೂತನ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ನ್ಯಾಯಾಲಯ ನಿರ್ಮಾಣವಾಗಿದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಳಂಬವಾಗಿದೆ. ಆದರೂ ಈಗಲಾದರೂ ಆಗಿದೆ ಎನ್ನುವ ಖುಷಿ ಇದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಲೆ, ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ, ಎಚ್. ಸಂಜೀವಕುಮಾರ, ಸಚಿವರಾದ ಎಚ್.ಕೆ. ಪಾಟೀಲ್, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಸಂಸದ ಸಂಗಣ್ಣ ಕರಡಿ, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವಕೀಲರ ಸಂಘದ ಬಿ.ವಿ. ಸಜ್ಜನ, ಕಾರ್ಯದರ್ಶಿ ಎಲ್.ಎಚ್. ನಿಂಗನಗೌಡ್ರ, ಖಜಾಂಜಿ ಸಿ.ಎಂ. ಪೊಲೀಸ್‌ಪಾಟೀಲ್, ಬಿ.ಎಸ್. ವೀರಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!