32 ತಿಂಗಳ ಬಳಿಕ ಇಂದು ಕನಕಗಿರಿ ಪಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

KannadaprabhaNewsNetwork |  
Published : Oct 01, 2024, 01:42 AM IST
೩೦ಕೆಎನ್‌ಕೆ-೧                                                                          ಕನಕಗಿರಿ ಪ.ಪಂ ಹೊರನೋಟ.  | Kannada Prabha

ಸಾರಾಂಶ

ಸದಸ್ಯರು ಆಯ್ಕೆಯಾಗಿ ೩೨ ತಿಂಗಳ ಬಳಿಕ ಇಲ್ಲಿನ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅ.೧ರಂದು ಬೆಳಗ್ಗೆ ೧೧ ಗಂಟೆಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ ತೆಕ್ಕೆಗೆ ಬಹುತೇಕ ಖಚಿತ । ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಎಂ.ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಸದಸ್ಯರು ಆಯ್ಕೆಯಾಗಿ ೩೨ ತಿಂಗಳ ಬಳಿಕ ಇಲ್ಲಿನ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅ.೧ರಂದು ಬೆಳಗ್ಗೆ ೧೧ ಗಂಟೆಗೆ ಚುನಾವಣೆ ನಡೆಯಲಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ೧೭ ಸದಸ್ಯರ ಪೈಕಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲಿ ಕಾಂಗ್ರೆಸ್ಸಿನ ಕಂಠಿರಂಗಪ್ಪ ನಾಯಕ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಅಧೀಕೃತ ಘೋಷಣೆಯೊಂದೆ ಬಾಕಿ ಉಳಿದಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮೂವರು ಮುಸ್ಲಿಂ ಸಮುದಾಯದ ಮಹಿಳಾ ಸದಸ್ಯರು ಹಾಗೂ ಓರ್ವ ಗಂಗಾಮತ ಸಮುದಾಯಕ್ಕೆ ಸೇರಿದ ಸದಸ್ಯೆ ಸೇರಿ ನಾಲ್ವರು ಕಣದಲ್ಲಿದ್ದಾರೆ.

ಒಟ್ಟು ೧೭ರ ಪೈಕಿ ೧೨ ಕಾಂಗ್ರೆಸ್, ೫ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಎ ವರ್ಗದ ನಾಲ್ವರು ಮಹಿಳಾ ಸದಸ್ಯರು ಸಚಿವ ತಂಗಡಗಿ, ಸ್ಥಳೀಯ ಮುಖಂಡರ ಬೆನ್ನು ಬಿದ್ದಿದ್ದಾರೆ.

ಈ ಹಿಂದೆ ಹಿಂದುಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದಾಗ ಮುಸ್ಲಿಂ ಸದಸ್ಯರಾಗಿದ್ದ ಖಾಜಾಸಾಬ ಗುರಿಕಾರಗೆ ತಮ್ಮದೇ ಪಕ್ಷದಲ್ಲಿದ್ದ ಇಬ್ಬರು ಮುಸ್ಲಿಂ ಸದಸ್ಯರು ಅಡ್ಡ ಮತದಾನ ಮಾಡಿದ್ದರಿಂದ ಕಾಂಗ್ರೆಸ್‌ನ ಖಾಜಸಾಬ ಸೋಲುಂಡಿದ್ದರು. ಈ ಬಾರಿಯ ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗ ಮಹಿಳೆಗೆ ಮೀಸಲಾಗಿದ್ದರಿಂದ ಸಮಾಜದ ಮೂವರು ಸದಸ್ಯರಿದ್ದು, ಮೂವರಲ್ಲಿ ಒಬ್ಬರಿಗೆ ಅಧಿಕಾರ ನೀಡುವಂತೆ ಮುಸ್ಲಿಂ ಸಮಾಜ ಸಚಿವ ತಂಗಡಗಿಯವರಲ್ಲಿ ಮನವಿ ಮಾಡಿದೆ.

ಇನ್ನೂ ೨೦೦೮ರಿಂದಲೂ ಸಚಿವ ತಂಗಡಗಿ ಜತೆ ಅತ್ಯಾಪ್ತನಾಗಿ ಗುರುತಿಸಿಕೊಂಡಿರುವ ಟಿ.ಜೆ. ರಾಮಚಂದ್ರರ ಪತ್ನಿ ತನುಶ್ರೀ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ದುಂಬಾಲು ಬಿದ್ದಿದ್ದಾರೆ. ಎಲ್ಲ ಪ.ಪಂ ಸದಸ್ಯರನ್ನು, ಪಕ್ಷದ ಮುಖಂಡರು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಂದಾಗಿದ್ದಾರೆ.

ಭಾನುವಾರ ಪಟ್ಟಣಕ್ಕೆ ಆಗಮಿಸಿದ್ದ ಸಚಿವ ತಂಗಡಗಿ ಕಾರ್ಯಕರ್ತರ, ಮುಖಂಡರ ಜತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇತ್ತ ಮೂವರು ಮಹಿಳಾ ಮುಸ್ಲಿಂ ಸದಸ್ಯರಾದ ಹುಸೇನಬಿ ಸಂತ್ರಾಸ್, ಶೈನಜಾಬೇಗಂ ಗುಡಿಹಿಂದಲರ ಹಾಗೂ ಹುಸೇನಬಿ ಚಳಮರದ ಕುಟುಂಬಸ್ಥರು ಸಹ ಅಧ್ಯಕ್ಷ ಹುದ್ದೆಗೇರಲು ಕಸರತ್ತು ನಡೆಸಿದ್ದಾರೆ. ಯಾವ ಸದಸ್ಯೆಗೆ ಅಧ್ಯಕ್ಷ ಸ್ಥಾನ ನೀಡಿದರೆ ಜವಾಬ್ದಾರಿಯುತ ನಡೆಸಿಕೊಂಡು ಹೋಗುತ್ತಾರೆ? ಪಕ್ಷಕ್ಕೆ ದುಡಿದವರ್‍ಯಾರು? ಹೀಗೆ ವಿವಿಧ ಆಯಾಮ, ಲೆಕ್ಕಾಚಾರಗಳು ಕಾಂಗ್ರೆಸ್ಸಿನಲ್ಲಿ ನಡೆದಿವೆ.

ಬಹುತೇಕ ಕಾಂಗ್ರೆಸ್ ಸದಸ್ಯರು ಸಚಿವ ತಂಗಡಗಿ ಹೇಳಿದಂತೆ ನಡೆದುಕೊಳ್ಳುವ ಮಾತು ಆಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಬಿಜೆಪಿಯಲ್ಲಿ ಸದಸ್ಯರಿಲ್ಲದ ಕಾರಣ ಕಾಂಗ್ರೆಸ್‌ನಲ್ಲಿ ಪರ್ಯಾಯವಾಗಿ ಕಣಕ್ಕಿಳಿದ ಅಭ್ಯರ್ಥಿಗೆ ಬೆಂಬಲಿಸುವ ಮಾತುಗಳು ಬಿಜೆಪಿ ಸದಸ್ಯರಿಂದ ವ್ಯಕ್ತವಾಗಿದೆ.

ಪಪಂಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅಧ್ಯಕ್ಷ, ಉಪಾಧ್ಯಕ್ಷರು ನಮ್ಮವರೇ ಆಗುತ್ತಾರೆ. ಯಾರೂ ಆಗುತ್ತಾರೆನ್ನುವುದು ಚುನಾವಣೆ ನಂತರ ಗೊತ್ತಾಗಲಿದೆ. ಕಾರ್ಯಕರ್ತರ, ಹಿರಿಯರ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು. ಇನ್ನು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಸದಸ್ಯ ಕಂಠಿರಂಗಪ್ಪ ಆಯ್ಕೆಯಾಗುವುದು ಖಚಿತ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಕನಕಗಿರಿ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅ.೧ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯ ಅಧಿಕಾರವಧಿ ಎರಡುವರೆ ವರ್ಷಕ್ಕೆ ಸೀಮಿತವಾಗಿದೆ. ಕೈ ಎತ್ತುವ ಮೂಲಕ ಚುನಾವಣೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ