33 ವರ್ಷದ ಬಳಿಕ ಅಲ್ಪಸಂಖ್ಯಾತರಿಗೆ ಕೊಪ್ಪಳ ನಗರಸಭೆ ಅಧ್ಯಕ್ಷ ಪಟ್ಟ

KannadaprabhaNewsNetwork |  
Published : Aug 21, 2024, 12:37 AM IST
20ಕೆಪಿಎಲ್101 ಅಮ್ಜಾದ್ ಪಟೇಲ್ 20ಕೆಪಿಎಲ್102 ಅಶ್ವಿನಿ ಗದುಗಿನಮಠ | Kannada Prabha

ಸಾರಾಂಶ

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್ ಆಯ್ಕೆಯಾಗುವುದು ಪಕ್ಕಾ ಆಗಿದ್ದು, 33 ವರ್ಷಗಳ ಬಳಿಕ ಕೊಪ್ಪಳ ನಗರಸಭೆ ಅಧ್ಯಕ್ಷ ಪಟ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಒಲಿಯುತ್ತಿದೆ. ಆದರೆ, ಬಿಜೆಪಿ ಸದಸ್ಯೆ ಅಶ್ವಿನಿ ಗದುಗಿನಮಠ ಅವರ ಆಯ್ಕೆಗೆ ಬಿಜೆಪಿ ಚೆಕ್ ಮೇಟ್ ನೀಡಿದ್ದು, ಕುತೂಹಲ ಮೂಡಿಸಿದೆ.

ಕೊಪ್ಪಳ ನಗರಸಭೆ - ಉಪಾಧ್ಯಕ್ಷರ ಆಯ್ಕೆಗೆ ಬಿಜೆಪಿ ಚೆಕ್‌ಮೆಟ್

33 ವರ್ಷದ ಬಳಿಕ ಅಲ್ಪಸಂಖ್ಯಾತರಿಗೆ ಕೊಪ್ಪಳ ನಗರಸಭೆ ಅಧ್ಯಕ್ಷ ಪಟ್ಟ

ಸೈಯದ್ ಮೈನುದ್ದೀನ್, ಎಸ್. ಎಚ್. ಖಾದ್ರಿ ಬಳಿಕ ಅಮ್ಜಾದ್ ಪಟೇಲ್ ಅಧ್ಯಕ್ಷ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್ ಆಯ್ಕೆಯಾಗುವುದು ಪಕ್ಕಾ ಆಗಿದ್ದು, 33 ವರ್ಷಗಳ ಬಳಿಕ ಕೊಪ್ಪಳ ನಗರಸಭೆ ಅಧ್ಯಕ್ಷ ಪಟ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಒಲಿಯುತ್ತಿದೆ. ಆದರೆ, ಬಿಜೆಪಿ ಸದಸ್ಯೆ ಅಶ್ವಿನಿ ಗದುಗಿನಮಠ ಅವರ ಆಯ್ಕೆಗೆ ಬಿಜೆಪಿ ಚೆಕ್ ಮೇಟ್ ನೀಡಿದ್ದು, ಕುತೂಹಲ ಮೂಡಿಸಿದೆ.

ನಗರಸಭೆಯಲ್ಲಿ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ಇದೆ. ಹೀಗಾಗಿ, ಕಾಂಗ್ರೆಸ್ ನಡೆದಿದ್ದೇ ದಾರಿ ಎನ್ನುವಂತೆ ಇದ್ದರೂ ಮಾಜಿ ಸಂಸದ ಸಂಗಣ್ಣ ಕರಡಿ ಬೆಂಬಲಿತ ಬಿಜೆಪಿ ಸದಸ್ಯೆ ಅಶ್ವಿನಿ ಗದುಗಿನಮಠ ಆಯ್ಕೆಗೆ ಕಾಂಗ್ರೆಸ್ ಕಸರತ್ತು ನಡೆಸಿದ್ದು, ಇದಕ್ಕೆ ಹೇಗಾದರೂ ಮಾಡಿ ಅಡ್ಡಗಾಲು ಹಾಕಲು ಈಗ ಕೊನೆಗಳಿಗೆಯಲ್ಲಿ ಬಿಜೆಪಿ ಮುಂದಾಗಿದೆ.

ಬಲಾಬಲ:

ಕೊಪ್ಪಳ ನಗರಸಭೆಯಲ್ಲಿ ಈಗ 29 ಸದಸ್ಯ ಬಲ ಇದೆ. ಇದರಲ್ಲಿ ಕಾಂಗ್ರೆಸ್ 14, ಬಿಜೆಪಿ 9, ಜೆಡಿಎಸ್ 2 ಹಾಗೂ ಪಕ್ಷೇತರ ನಾಲ್ವರು ಸೇರಿದ್ದಾರೆ. ಇದರ ಜೊತೆಗೆ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಮತಗಳು ಕಾಂಗ್ರೆಸ್‌ಗೆ ಬರಲಿವೆ.

ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಹಾಗೂ ಸಂಸದ, ಶಾಸಕರ ಮತ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಬರೋಬ್ಬರಿ 22 ಮತ ಆಗುತ್ತವೆ. ಇನ್ನು ಬಿಜೆಪಿಯಲ್ಲಿರುವ 9 ಸದಸ್ಯರಲ್ಲಿ ಮೂವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವುದರಿಂದ ಬಿಜೆಪಿಯ ಬಲ ವಾಸ್ತವದಲ್ಲಿ 6ಕ್ಕೆ ಇಳಿದಿದೆ.

ಅಧ್ಯಕ್ಷರ ಆಯ್ಕೆ ನಿರಾಳ:

ಅಮ್ಜಾದ್ ಪಟೇಲ್ ಆಯ್ಕೆ ನಿರಾಳವಾಗಿದೆ. ಸದಸ್ಯರಲ್ಲಿ ಇದ್ದ ಎಲ್ಲ ಗೊಂದಲಗಳನ್ನು ನಿವಾರಣೆ ಮಾಡಿ, ಸರ್ವಾನುಮತದಿಂದ ಆಯ್ಕೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ನಿಂದ ಅಮ್ಜಾದ್ ಪಟೇಲ್ ಮಾತ್ರ ನಾಮಪತ್ರ ಸಲ್ಲಿಸುವುದರಿಂದ ಅವರು ಆಯ್ಕೆಯಾಗುವುದು ಪಕ್ಕಾ ಆಗಿದೆ.

1983ರಲ್ಲಿ ಸೈಯದ್ ಮೈನುದ್ದೀನ್ ಹಾಗೂ 1991ರಲ್ಲಿ ಎಸ್.ಎಚ್. ಖಾದ್ರಿ ಕೊಪ್ಪಳ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಾದ ಮೇಲೆ ಅಲ್ಪಸಂಖ್ಯಾತ ಸಮುದಾಯದ ಅಮ್ಜಾದ್ ಪಟೇಲ್ ಅಧ್ಯಕ್ಷರಾಗಿ 33 ವರ್ಷಗಳ ಬಳಿಕ ಆಯ್ಕೆಯಾಗುತ್ತಿದ್ದಾರೆ.

2001ರಿಂದ ಅಮ್ಜಾದ್ ಪಟೇಲ್ ಸತತ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಕಳೆದ 3 ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಮಾಡಿದ ಅನುಭವ ಇದೆ.

ಉಪಾಧ್ಯಕ್ಷರ ಆಯ್ಕೆ ಚೆಕ್ ಮೇಟ್:

ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿಯ ಸದಸ್ಯೆ ಅಶ್ವಿನಿ ಗದುಗಿನಮಠ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವುದು ಪಕ್ಕಾ ಆಗಿದೆ.

ಆದರೆ, ಈಗ ಕೊನೆ ಗಳಿಗೆಯಲ್ಲಿ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ನೀಡುವ ಮೂಲಕ ಚೆಕ್‌ಮೀಟ್‌ ನೀಡಿದೆ.

ಪಕ್ಷದ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೇವಕ್ಕ ಕಂದಾರಿ ಅವರನ್ನು ಅಖಾಡಕ್ಕೆ ಇಳಿಸಲಾಗುತ್ತಿದ್ದು, ಪಕ್ಷದ ಸದಸ್ಯರು ಇವರಿಗೆ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಟೆನ್ಶನ್ ನೀಡಿದೆ.

ಕಾನೂನು ಸಮಸ್ಯೆ:

ಬಿಜೆಪಿಯಿಂದ ಆಯ್ಕೆಯಾಗಿರುವ ಅಶ್ವಿನಿ ಗದುಗಿನ ಮಠ ಕಾಂಗ್ರೆಸ್‌ಗೆ ಮತ ಹಾಕುವುದಾಗಲಿ ಅಥವಾ ವಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ಕಾಯ್ದೆ ಅಡ್ಡಿಯಾಗಿ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ, ಇದನ್ನು ತಪ್ಪಿಸಿಕೊಂಡು ಆಯ್ಕೆಯಾಗುವುದಕ್ಕೆ ಇರುವ ದಾರಿಗಳನ್ನು ಕಾಂಗ್ರೆಸ್ ಹುಡುಕುತ್ತಿದೆ.

ಅಶ್ವಿನಿ ಗದಗಿನಮಠ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಮತ ಚಲಾಯಿಸುವುದಿಲ್ಲ, ಆದರೆ, ತಾನು ಉಪಾಧ್ಯಕ್ಷೆಯಾಗಿ ನಾಮಪತ್ರ ಸಲ್ಲಿಸಿ, ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆಯುವ ಮೂಲಕ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹೀಗೆ, ಕಾಂಗ್ರೆಸ್ ಹಲವಾರು ದಾರಿ ಕಂಡುಕೊಳ್ಳುವ ತಯಾರಿ ನಡೆಸಿದ್ದರೆ ಬಿಜೆಪಿಯವರು ವಿಪ್ ನೀಡಿ ಕಾನೂನಿನ ಆಟ ಆಡುತ್ತಿದ್ದಾರೆ. ಹೀಗಾಗಿ, ಅಧ್ಯಕ್ಷರಾಗಿ ಅಮ್ಜಾದ್ ಪಟೇಲ್ ಆಯ್ಕೆ ಪಕ್ಕಾ ಆಗಿದ್ದರೂ ಉಪಾಧ್ಯಕ್ಷೆಯಾಗಿ ಅಶ್ವಿನಿ ಗದುಗಿನಮಠ ಅವರ ಆಯ್ಕೆಗೆ ನೂರೆಂಟು ವಿಘ್ನಗಳು ಎದುರಾಗಿದ್ದು, ಕಾಂಗ್ರೆಸ್ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!