4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಚುನಾವಣೆ

KannadaprabhaNewsNetwork |  
Published : Dec 12, 2025, 01:45 AM IST
ಓಟು ಕೊಡಿ | Kannada Prabha

ಸಾರಾಂಶ

ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

- 6500 ಪೌರಸಂಸ್ಥೆಗೂ ಆಗಲೇ ಎಲೆಕ್ಷನ್‌- ಅಗತ್ಯ ಸಿದ್ಧತೆ ಸಂಪುಟ ಸಭೆ ತೀರ್ಮಾನ

---

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಿರಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು, ಗ್ರಾಮ ಪಂಚಾಯ್ತಿಗಳ ಅವಧಿಯೂ ಮುಗಿಯುತ್ತಿದೆ. ಜಿ.ಪಂ., ತಾ.ಪಂ. ಚುನಾವಣೆ ವಿಳಂಬದ ಪ್ರಕರಣ ನ್ಯಾಯಾಲಯದಲ್ಲಿದ್ದು, ತ್ವರಿತಗತಿಯಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವೂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ 30 ತಿಂಗಳ ಅವಧಿಯಲ್ಲಿ ಇದುವರೆಗೂ ಒಂದೂ ಸ್ಥಳೀಯ ಸಂಸ್ಥೆ ಚುನಾವಣೆ ಕೂಡ ನಡೆದಿಲ್ಲ. ಹೀಗಾಗಿ ಅನಗತ್ಯ ವಿಳಂಬ ಮಾಡದೆ ಅಗತ್ಯ ಸ್ಥಳೀಯ ಸಂಸ್ಥೆಗಳಿಗೆ ವ್ಯಾಪ್ತಿ ಪುನರ್‌ ವಿಂಗಡಣೆ ಮಾಡಿಕೊಂಡು ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಬಳಿಕ ಚುನಾವಣಾ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗಿದೆ.

6,500 ಸ್ಥಳೀಯ ಸಂಸ್ಥೆಗಳ ಚುನಾವಣೆ:

6,500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಚುನಾವಣೆಗಾಗಿ ಕಾಯುತ್ತಿವೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದು, ವಿರೋಧ ಪಕ್ಷಗಳು ಮತ್ತು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಕೂಡ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.

ಚುನಾವಣೆ ನಡೆಯಬೇಕಿರುವ ಸ್ಥಳೀಯ ಸಂಸ್ಥೆಗಳ ಪೈಕಿ 195 ನಗರ ಸ್ಥಳೀಯ ಸಂಸ್ಥೆ, ಜತೆಗೆ 5,952 ಗ್ರಾಮ ಪಂಚಾಯಿತಿಗಳ ಅವಧಿ ಕೂಡ ಮುಗಿಯಲಿದೆ. ಇದರ ಜೊತೆಗೆ, 31 ಜಿಲ್ಲಾ ಪಂಚಾಯಿತಿ, 239 ತಾಲೂಕು ಪಂಚಾಯಿತಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ನಗರ ನಿಗಮಗಳ ಚುನಾವಣೆಗಳು ಬಾಕಿ ಇವೆ.

ಈ ಪೈಕಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ಹೊಸ ನಗರ ಪಾಲಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ರೈತರು, ಕಾರ್ಮಿಕರು ಮತ್ತು ಕೂಲಿಕಾರರ ವಿರೋಧಿ ನೀತಿ: ಮಂಜುಳಾ