5 ವರ್ಷದ ಬಳಿಕ ಕೆಂಪೇಗೌಡ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jun 22, 2025, 01:19 AM ISTUpdated : Jun 22, 2025, 06:51 AM IST
Know interesting facts about the founder of Bangalore Nadaprabhu Kempegowda

ಸಾರಾಂಶ

ಐದು ವರ್ಷದ ಬಳಿಕ ಬಿಬಿಎಂಪಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಲಾಗಿದೆ.

  ಬೆಂಗಳೂರು :  ಐದು ವರ್ಷದ ಬಳಿಕ ಬಿಬಿಎಂಪಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಲಾಗಿದೆ.

ಜೂನ್ 27 ರಂದು ಬಿಬಿಎಂಪಿಯಿಂದ 516ನೇ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭವನ್ನು ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

2020ರ ನಂತರ ಕೋವಿಡ್‌ ನೆಪ ಹೇಳಿ ಪ್ರಶಸ್ತಿ ಪ್ರದಾನ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಪ್ರಶಸ್ತಿ ಪ್ರದಾನಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಪ್ರದಾನ ಕೈ ಬಿಟ್ಟು ಸರಳವಾಗಿ ಜಯಂತಿ ಆಚರಣೆಗೆ ಕೆಂಪೇಗೌಡ ಜನ್ಮದಿನಾಚರಣೆ ಸೀಮಿತವಾಗಿತ್ತು. ಈ ಬಾರಿ ಅದ್ಧೂರಿಯಾಗಿ ಆಚರಣೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲು ತಯಾರಿ ಮಾಡಲಾಗುತ್ತಿದೆ.

ಈ ಹಿಂದೆ 2023ರಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಆಯ್ಕೆ ಸಮಿತಿ ರಚನೆ ಮಾಡಲಾಗಿತ್ತು. ಆಗ ಅರ್ಜಿ ಸಲ್ಲಿಸಿದ 800 ಮಂದಿಯ ಪೈಕಿ 163 ಮಂದಿ ಸಾಧಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತು. ಅದೇ ಪಟ್ಟಿಯನ್ನು ಇದೀಗ ಪರಿಷ್ಕರಿಸಿ ಪುರಸ್ಕೃತರನ್ನು ಅಂತಿಮಗೊಳಿಸುವುದಕ್ಕೆ ಚಿಂತನೆ ನಡೆಸಲಾಗಿದೆ.

ಈಗಾಗಲೇ ಸಂಭವನೀಯ ಪುರಸ್ಕೃತರ ಪಟ್ಟಿಯನ್ನು ಉಪ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಅಂತಿಮ ಪುರಸ್ಕೃತ ಪಟ್ಟಿಯನ್ನು ಬಿಬಿಎಂಪಿಗೆ ನೀಡಲಿದೆ. ಅದರಂತೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಶಸ್ತಿಗೆ ಅರ್ಜಿ ಆಹ್ವಾನಕ್ಕೆ ಸಮಯವಿಲ್ಲ

ಹೊಸದಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಾಡುವುದಕ್ಕೆ ಈ ಬಾರಿ ಸಮಯ ಇಲ್ಲ. ಹಾಗಾಗಿ, ಈ ಹಿಂದೆ ಸಲ್ಲಿಕೆಯಾಗಿರುವ ಪುರಸ್ಕೃತರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಅಂತಿಮ ಪುರಸ್ಕೃತರ ಪಟ್ಟಿ ಸಿದ್ಧ ಪಡಿಸಲಾಗುವುದು. ಸೋಮವಾರ ಅಥವಾ ಮಂಗಳವಾರದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಸುಮಾರು 100 ರಿಂದ 150 ಮಂದಿ ಸಾಧಕರಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ, ಬಿಬಿಎಂಪಿಯ 50 ಉತ್ತಮ ಅಧಿಕಾರಿ ನೌಕರರಿಗೆ ಪ್ರಶಸ್ತಿ ನೀಡಿ ಇದೇ ವೇಳೆ ಗೌರವಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್‌ ಕುಮಾರ್‌ ರಾಜು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೆಂಪೇಗೌಡ ಭವನಕ್ಕೆ ಭೂಮಿ ಪೂಜೆಸಚಿವ ಸಂಪುಟದಲ್ಲಿ ಸುಮ್ಮನಹಳ್ಳಿಯ ಬಾಬು ಜಗಜೀವನ್‌ ರಾಮ್‌ ಭವನದ ಪಕ್ಕದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಜೂನ್‌ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಬಳಿಕ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿರುವ ರಾಜ್ಯಮಟ್ಟದ ವೇದಿಕೆ ಕಾರ್ಯಕ್ರಮ ನಡೆಲಿದೆ.

ಸಂಜೆ ಬಿಬಿಎಂಪಿಯಿಂದ ಕೇಂದ್ರ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಜೂನ್‌ 27ರಂದು ವಿಧಾನಸೌಧ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕೆಂಪೇಗೌಡರ ನಾಲ್ಕು ಗಡಿ ಗೋಪುರ ಹಾಗೂ ಮೂರು ಐತಿಹಾಸಿಕ ಸ್ಥಳ ಸೇರಿ ಒಟ್ಟು 7 ಕಡೆಯಿಂದ ಜ್ಯೋತಿ ಮರವಣಿಗೆ ನಡೆಯಲಿದೆ ಎಂದು ನವೀನ್‌ ಕುಮಾರ್‌ ರಾಜು ಮಾಹಿತಿ ನೀಡಿದರು.

ಪ್ರತಿ ತಾಲೂಕಿಗೂ ಒಂದು ಲಕ್ಷ ರು

ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಬಿಬಿಎಂಪಿಯಿಂದ ತಲಾ 1 ಲಕ್ಷ ರು, ಬೆಂಗಳೂರಿನ ವಿಧಾನಸಭಾ ಕ್ಷೇತ್ರವಾರು ತಲಾ 3 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್‌ ಕುಮಾರ್‌ ರಾಜು ತಿಳಿಸಿದರು.

-ಜೂನ್‌ 27 ರಂದು ಗಾಜಿನ ಮನೆಯಲ್ಲಿ ಜಯಂತಿ ಆಯೋಜನೆ

-ಹೊಸದಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲು ಸಮಯದ ಅಭಾವ

- ಹಾಗಾಗಿ, ಈ ಹಿಂದೆ ಸಲ್ಲಿಕೆಯಾಗಿರುವ ಪುರಸ್ಕೃತರ ಪಟ್ಟಿಗೇ ಪರಿಷ್ಕರಣೆ

-ಸುಮಾರು 100 ರಿಂದ 150 ಸಾಧಕರಿಗೆ ಈ ಬಾರಿ ಪ್ರಶಸ್ತಿ ಪ್ರದಾನ

- ಜತೆಗೆ, ಬಿಬಿಎಂಪಿಯ 50 ಉತ್ತಮ ಅಧಿಕಾರಿ ನೌಕರರಿಗೆ ಪ್ರಶಸ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ