ಮಂಗಳೂರು: ಗುರುವಾರ ಮುಂಜಾನೆ ಕವಿದ ಮಂಜಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಯಾನದಲ್ಲಿ ವ್ಯತ್ಯಯ ಉಂಟಾಯಿತು. ಬೆಂಗಳೂರಿನಿಂದ ಮುಂಜಾನೆ ಆಗಮಿಸಿದ ಇಂಡಿಗೋ ವಿಮಾನ ರನ್‌ವೇ ಮತ್ತು ಪರಿಸರದಲ್ಲಿ ದಟ್ಟ ಮಂಜು ಮುಸುಕಿದ ಕಾರಣ ನೇರವಾಗಿ ಇಳಿಯಲು ಸಾಧ್ಯವಾಗದೆ ಕೆಲ ಕಾಲ ಆಗಸದಲ್ಲೇ ಸುತ್ತು ಹಾಕಬೇಕಾಯಿತು. ಪರಿಸರ ತಿಳಿಯಾದ ಬಳಿಕ ವಿಮಾನ ಇಳಿಯಿತು. ವಿಮಾನವನ್ನು ಬೇರೆ ನಿಲ್ದಾಣಕ್ಕೆ ಕಳುಹಿಸುವ ಪರಿಸ್ಥಿತಿ ಉಂಟಾಗಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ. ವಿಮಾನ ತಡವಾಗಿ ಇಳಿದ ಪರಿಣಾಮ ಅದು ಮತ್ತೆ ಬೆಂಗಳೂರಿಗೆ ವಾಪಸಾಗುವ ಸಮಯ ಕೂಡ ವಿಳಂಬವಾಗಿದೆ.