ಬೆಂಗಳೂರು : ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧಿಸಿದ್ದ ರಾಜ್ಯ ಸರ್ಕಾರವು ತಕ್ಷಣದಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಕಬಾಬ್‌ಗಳಲ್ಲಿ ಕೃತಕ ಬಣ್ಣ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘಿಸಿದರೆ 7 ವರ್ಷಗಳಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಆಹಾರ ಸುರಕ್ಷತಾ ಇಲಾಖೆಯು ಮೀನು, ವೆಜ್, ಚಿಕನ್ ಕಬಾಬ್ ಸೇರಿದಂತೆ ಎಲ್ಲಾ ರೀತಿಯ ಕಬಾಬ್‌ಗಳಲ್ಲೂ ಕೃತಕ ಬಣ್ಣ ಬಳಕೆ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ಕಬಾಬ್‌ಗಳಲ್ಲಿನ ಕೃತಕ ಬಣ್ಣಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರೆಸುವಿಕೆಯನ್ನು ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಜೀವಾವಧಿ ಜೈಲು ಶಿಕ್ಷೆ, 10 ಲಕ್ಷವರೆಗೆ ದಂಡ: ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ 8 ಮಾದರಿಗಳು ಕೃತಕ ಬಣ್ಣ ಹೊಂದಿದ್ದವು. ಈ ಪೈಕಿ ಏಳು ಮಾದರಿಯಲ್ಲಿ ಸನ್‌ಸೆಟ್ ಯೆಲ್ಲೋ, ಒಂದು ಮಾದರಿಯಲ್ಲಿ ಕಾರ್ಮೊಸಿನ್ ಎಂಬ ಅಸುರಕ್ಷಿತ ಬಣ್ಣದ ಮಾದರಿ ಪತ್ತೆಯಾಗಿತ್ತು. ಇದು ಆಹಾರ ಸುರಕ್ಷತಾ ಕಾಯಿದೆ ಅಡಿ ನಿಷೇಧಿತ. ಹೀಗಾಗಿ ಕಬಾಬ್‌ನಲ್ಲಿ ಯಾವುದೇ ಕೃತಕ ಬಣ್ಣದ ಬಳಕೆ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 7 ವರ್ಷಗಳಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.