ಹಿಂದೂಗಳು ಇದನ್ನು ಭೋಜ ರಾಜ ನಿರ್ಮಿಸಿದ ವಾಗ್ದೇವಿ (ಸರಸ್ವತಿ) ದೇಗುಲ ಎನ್ನುತ್ತಾರೆ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಆಡಳಿತದಲ್ಲಿ ಧ್ವಂಸಗೊಳಿಸಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೂರುತ್ತಾರೆ. ಆದರೆ ಇದು ದೇಗುಲವಲ್ಲ, ಕಮಲ್ ಮೌಲಾ ಮಸೀದಿ ಎಂಬುದು ಮುಸ್ಲಿಮರ ವಾದ.
ಹೀಗಾಗಿ 2003ರಿಂದ ಇಲ್ಲಿ ಪ್ರತಿ ಮಂಗಳವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಪುರಾತತ್ವ ಇಲಾಖೆ ವಶದಲ್ಲಿರುವ ಈ ದೇಗುಲವನ್ನು ಮರಳಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಇದನ್ನು ಮುಸ್ಲಿಂ ಬಣ ವಿರೋಧಿಸಿತ್ತು. ಈ ಕುರಿತು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇದೀಗ ವಿವಾದಿತ ಪ್ರದೇಶದ ಇತಿಹಾಸ ಅರಿಯಲು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದೆ.ವಿಶೇಷವೆಂದರೆ ಕಾಶಿ ಜ್ಞಾನವಾಪಿ ಮಸೀದಿ, ಮಥುರಾ ಕೃಷ್ಣ ಮಂದಿರ ಪ್ರಕರಣದಲ್ಲಿ ಹಿಂದೂಗಳ ಪರ ವಕೀಲರಾಗಿರುವ ವಿಷ್ಣು ಶಂಕರ್ ಜೈನ್ ಅವರ ಕೋರಿಕೆ ಅನ್ವಯ ಇಲ್ಲಿ ಸಮೀಕ್ಷೆಗೆ ಆದೇಶ ಹೊರಬಿದ್ದಿದೆ. 1902-03ರಲ್ಲಿ ಎಎಎಸ್‌ಐ ನಡೆಸಿದ್ದ ಉತ್ಖನನದ ವೇಳೆ ಇದು ಮೂಲ ಹಿಂದೂ ದೇಗುಲ ಎಂದು ಕಂಡುಬಂದಿತ್ತು.