ಹಾಸನ : ಪಕ್ಷದ ಕಾರ್ಯಕರ್ತ ಯುವಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ವಿಚಾರಣೆಗಾಗಿ ಸಿಇಎನ್ ಠಾಣೆಗೆ ಕರೆಯಿಸಿ ಬಳಿಕ ಪೊಲೀಸರು ಬಂಧಿಸಿದ್ದಾರೆ. ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಈಗ ಎಚ್.ಡಿ.ರೇವಣ್ಣ ಕುಟುಂಬದ ಮತ್ತೊಬ್ಬ ಸದಸ್ಯನ ಬಂಧನವಾದಂತಾಗಿದೆ.
ರಾತ್ರಿ ೭.೩೦ರ ಸಮಯದಲ್ಲಿ ಸಿಇಎನ್ ಪೊಲೀಸ್ ಠಾಣೆಗೆ ಡಾ.ಸೂರಜ್ ರೇವಣ್ಣ ಅವರನ್ನು ಕರೆತಂದಿದ್ದ ಪೊಲೀಸರು ಸಂತ್ರಸ್ತ ನೀಡಿರುವ ದೂರು ಹಾಗೂ ಸೂರಜ್ ಆಪ್ತ ನೀಡಿರುವ ದೂರುಗಳ ಪ್ರತ್ಯೇಕ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಠಾಣೆಗೆ ಹಾಸನ ಜಿಲ್ಲಾ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಚರ್ಚಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದ್ದರು.
ಮತ್ತೊಂದೆಡೆ ಸಂತ್ರಸ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ ಪೊಲೀಸರು ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ದೊರಕಿದ ನಂತರ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಶನಿವಾರ ರಾತ್ರಿಯಿಂದ ಸಿಇಎನ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆಗೊಳಪಡಿಸಿದ್ದ ತನಿಖಾಧಿಕಾರಿ ಸಕಲೇಶಪುರದ ಡಿವೈಎಸ್ಪಿ ಪ್ರಮೋದ್ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಒಂದೆಡೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿರುವಾಗಲೇ ಅವರ ಅಣ್ಣ ಡಾ.ಸೂರಜ್ ರೇವಣ್ಣ ಬಂಧನವಾಗಿದ್ದಾರೆ. ಈಗ ರೇವಣ್ಣ ಇಬ್ಬರು ಪುತ್ರರೂ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವಂತಾಗಿದೆ.
ಮಾಜಿ ಸಚಿವರ ಪುತ್ರ ಆಗಿರುವುದರಿಂದ ಪೊಲೀಸ್ ಠಾಣೆ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ನಗರದ ಎನ್.ಆರ್. ವೃತ್ತದ ಬಳಿ ಇರುವ ಸೆನ್ ಠಾಣೆಗೆ ಸೂರಜ್ ಅವರನ್ನು ವಾಪಸ್ ಕರೆ ತಂದ ಪೊಲೀಸರು ಠಾಣೆಗೆ ಬಂದ ಸೂರಜ್ ಪರ ವಕೀಲ ಪೂರ್ಣಚಂದ್ರ ಅವರೊಂದಿಗೆ ಕೆಲ ಸಮಯ ಚರ್ಚೆ ನಡೆಸಿದರು.
ಲೋಕಸಭಾ ಚುನಾವಣೆ ಪ್ರಚಾರದ ನಂತರ ಮತದಾನ ನಡೆಯುವ ನಾಲ್ಕು ದಿನಗಳು ಇರುವ ಮೊದಲು ಮೈತ್ರಿ ಅಭ್ಯರ್ಥಿ ಆಗಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋ ಹರಡಿದ ಆರೋಪ ಕೇಳಿ ಬರುತ್ತಿದ್ದಂತೆ ಪ್ರಜ್ವಲ್ ದೇಶ ಬಿಟ್ಟು ಜರ್ಮನಿಗೆ ಹಾರಿದ್ದರು. ನಂತರ ಮತ್ತೆ ವಾಪಸ್ ಬಂದು ಜೈಲು ವಾಸ ಅನುಭವಿಸುತ್ತಿದ್ದಾರೆ. ಇನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಕೂಡ ಕೇಸು ದಾಖಲಾಗಿದೆ. ನಂತರ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಈಗ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮಕ್ಕೆ ಒಳಗಾಗಿರುವ ಸಂತ್ರಸ್ತನ ದೂರಿನ ಮೇರೆಗೆ ಸೂರಜ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.