ಕನ್ನಡಪ್ರಭ ವಾರ್ತೆ ಗಂಗಾವತಿ
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ವಿಧಾನಸಭೆಯ ಉಪಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೀದಿಗೆ ಬೀಳುವುದು ಖಚಿತ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಮುಡಾ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಆಯುಕ್ತರು ಮತ್ತು ಸಿದ್ದರಾಮಯ್ಯ ಆಪ್ತನ ಮೇಲೆ ಇಡಿ ದಾಳಿ ಮಾಡಿರುವುದು ಹಗರಣಕ್ಕೆ ಪುಷ್ಟಿ ನೀಡಿದೆ ಎಂದರು.ವಕ್ಫ್ ಬೋರ್ಡಿಗೆ ಸಂಬಂಧಿಸಿದ ಭೂಮಿ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲೆಗಳಲ್ಲಿ ರೈತರ ಹೊಲಗಳನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಹೊರಟಿದೆ. ಅಲ್ಲದೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಹೊರಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗೆ ತಿದ್ದುಪಡಿ ತಂದು ಜನರ ಮುಂದೆ ಇಡುತ್ತಿದ್ದಾರೆ ಎಂದರು.
ಮಾಜಿ ಸಚಿವ ನಾಗೇಂದ್ರ ಅವರ ಅಕ್ರಮ ಹಣ ಯಾರ್‍ಯಾರು ಖಾತೆಗೆ ಜಮಾ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು, ಇದೇ ಹಗರಣದಲ್ಲಿ ಸಂಸದ ತುಕಾರಾಮ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ ಎಂದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ₹140 ಕೋಟಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕನಕಗಿರಿ ಕ್ಷೇತ್ರಕ್ಕೆ ₹40 ಕೋಟಿ, ಕುಷ್ಟಗಿ ಕ್ಷೇತ್ರಕ್ಕೆ ₹5 ಕೋಟಿ ನೀಡಿದ್ದಾರೆ. ಆದರೆ ಗಂಗಾವತಿ ಕ್ಷೇತ್ರಕ್ಕೆ ಒಂದು ನೈಯಾ ಪೈಸೆ ನೀಡಿಲ್ಲ. ಸಚಿವರು ತಾರತಮ್ಯ ಮಾಡಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.