ನಿಶ್ಚಿತಾರ್ಥ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

KannadaprabhaNewsNetwork |  
Published : May 07, 2025, 12:45 AM IST
ಫೋಟೋ 5ಎಚ್‌ಯುಬಿ24ಅಪಘಾತದಲ್ಲಿ ಮೃತಪಟ್ಟ ಶೆಟ್ಟಿ ಕುಟುಂಬದವರು | Kannada Prabha

ಸಾರಾಂಶ

ಭಾನುವಾರ ಅಂದುಕೊಂಡಂತೆ ನಿಶ್ಚಿತಾರ್ಥ ಮುಗಿದಿತ್ತು. ಸೋಮವಾರ ಒಂದು ದಿನ ತಮ್ಮೂರಲ್ಲೇ ಕಳೆದು ಮಂಗಳವಾರ ನಸುಕಿನಲ್ಲಿ ಕಾರಿನಲ್ಲಿ ಪತ್ನಿ ಶಶಿಕಲಾ, ಮಗಳು ಶ್ವೇತಾ, ಮಗ ಸಂದೀಪ ಮತ್ತು ಅಣ್ಣನ ಮಗಳು ಅಂಜಲಿ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆ 7ರ ವೇಳೆಗೆ ವರೂರಿನಲ್ಲಿ ತಿಂಡಿ ಮುಗಿಸಿ ಮತ್ತೆ ಪ್ರಯಾಣ ಬೆ‍ಳೆಸಿದ್ದಾರೆ. ಮಗ ಸಂದೀಪ ಕಾರು ಚಲಾಯಿಸುತ್ತಿದ್ದ ಹುಬ್ಬಳ್ಳಿ ಬಳಿಯ ಕುಸುಗಲ್‌ ದಾಟುತ್ತಿದ್ದಂತೆ ನಿದ್ದೆ ಮಂಪರಿನಲ್ಲಿದ್ದ ಸಂದೀಪ ಲಾರಿಗೆ ಕಾರ್‌ ಡಿಕ್ಕಿ ಹೊಡೆಸಿದ್ದಾನೆ. ಅತಿ ವೇಗದಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಒಳಗಿದ್ದ ಎಲ್ಲರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಹುಬ್ಬಳ್ಳಿ: ಶಿವಮೊಗ್ಗ ಜಿಲ್ಲೆ ಸಾಗರದ ಮೂರ್ಕೈ ಗ್ರಾಮದ ಶೆಟ್ಟಿ ಕುಟುಂಬದಲ್ಲಿ ಸಂಭ್ರಮ- ಸಡಗರದ ವಾತಾವಾರಣ. ಮಗಳು ಶ್ವೇತಾ ಶೆಟ್ಟಿ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ನೆಂಟರು, ಗೆಳೆಯರೆಲ್ಲರೂ ಸೇರಿ ಮನೆಯಲ್ಲಿ ಸೇರಿ ಸಂಭ್ರಮದಿಂದ ನಿಶ್ಚಿತಾರ್ಥ ಮಾಡಿದ್ದರು. ಇನ್ನೇನು ಮದುವೆ ಆರಂಭಿಸುವ ಸಿದ್ಧತೆಯಲ್ಲಿ ಕುಟುಂಬದವರು ಕುಳಗೇರಿಗೆ ಮರಳುತ್ತಿದ್ದರು. ಆದರೆ, ವಿಧಿಯಾಟ ನಿಶ್ಚಿತಾರ್ಥ ಆದ ಮರುದಿನವೇ ವಧು ಸಮೇತ ಇಡೀ ಕುಟುಂಬವೇ ಅಪಘಾತದಲ್ಲಿ ಮಸಣ ಸೇರಿದೆ.

ಮಂಗಳವಾರ ಬೆಳಗ್ಗೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಬಳಿಯ ಕ್ರಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾದಲ್ಲಿ ಒಂದೇ ಕುಟುಂಬದ ಐವರು ಅಸುನೀಗುವ ಮೂಲಕ ದುಃಖದಲ್ಲಿ ಮುಳುಗುವಂತಾಗಿದೆ.

ವಿಠ್ಠಲ ಶೆಟ್ಟಿ ಅವರು ಕಳೆದ 35 ರಿಂದ 40 ವರ್ಷಗಳ ಹಿಂದೆ ಸಾಗರ ತಾಲೂಕಿನ ಮುರ್ಕೈಯಿಂದ ಬಂದು ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲೇ ಹೋಟೆಲ್‌ ನಡೆಸುತ್ತಿರುವ ವಿಠ್ಠಲ ಶೆಟ್ಟಿ ಅವರ ಮಗಳ ನಿಶ್ಚಿತಾರ್ಥ ಭಾನುವಾರದಂದು ಇತ್ತು. ಹೀಗಾಗಿ, ಸಂಭ್ರಮದಿಂದಲೇ ಗೆಳೆಯನ ಕಾರು ಪಡೆದು ತಮ್ಮೂರಿಗೆ ತೆರಳಿದ್ದರು. ಭಾನುವಾರ ಅಂದುಕೊಂಡಂತೆ ನಿಶ್ಚಿತಾರ್ಥ ಮುಗಿದಿತ್ತು. ಸೋಮವಾರ ಒಂದು ದಿನ ತಮ್ಮೂರಲ್ಲೇ ಕಳೆದು ಮಂಗಳವಾರ ನಸುಕಿನಲ್ಲಿ ಕಾರಿನಲ್ಲಿ ಪತ್ನಿ ಶಶಿಕಲಾ, ಮಗಳು ಶ್ವೇತಾ, ಮಗ ಸಂದೀಪ ಮತ್ತು ಅಣ್ಣನ ಮಗಳು ಅಂಜಲಿ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆ 7ರ ವೇಳೆಗೆ ವರೂರಿನಲ್ಲಿ ತಿಂಡಿ ಮುಗಿಸಿ ಮತ್ತೆ ಪ್ರಯಾಣ ಬೆ‍ಳೆಸಿದ್ದಾರೆ. ಮಗ ಸಂದೀಪ ಕಾರು ಚಲಾಯಿಸುತ್ತಿದ್ದ ಹುಬ್ಬಳ್ಳಿ ಬಳಿಯ ಕುಸುಗಲ್‌ ದಾಟುತ್ತಿದ್ದಂತೆ ನಿದ್ದೆ ಮಂಪರಿನಲ್ಲಿದ್ದ ಸಂದೀಪ ಲಾರಿಗೆ ಕಾರ್‌ ಡಿಕ್ಕಿ ಹೊಡೆಸಿದ್ದಾನೆ. ಅತಿ ವೇಗದಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಒಳಗಿದ್ದ ಎಲ್ಲರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಎರಡೇ ದಿನದಲ್ಲಿ ಸಾವು: ಶ್ವೇತಾ ಬಾದಾಮಿಯ ಶೂರೂಮ್‌ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದಳು. ತಮ್ಮೂರಿಗೆ ಹೋಗುವ ಮೊದಲು ಜತೆಗೆ ಕೆಲಸ ಮಾಡುತ್ತಿದ್ದವರಿಗೆ ಖುಷಿ ಖುಷಿಯಾಗೇ ತನ್ನ ನಿಶ್ಚಿತಾರ್ಥದ ವಿಷಯ ತಿಳಿಸಿ ಹೋಗಿದ್ದಳು. ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯಿತು. ಆದರೆ, ಮಂಗ‍ಳವಾರ ನಡೆದ ಅಪಘಾತದಲ್ಲಿ ಜೀವಕಳೆದುಕೊಂಡಿದ್ದಾಳೆ.

ಸೌಮ್ಯ ಸ್ವಭಾವದ ಅಂಜಲಿ: ನರಗುಂದ ತಾಲೂಕಿನ ಹಳ್ಳಿಯೊಂದರಲ್ಲಿ ಅಂಜಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2016ರಲ್ಲಿ ಇವರು ಗ್ರಾಮಲೆಕ್ಕಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಸೌಮ್ಯ ಸ್ವಭಾವದ ಅಂಜಲಿ ಎಲ್ಲರ ಜತೆ ಬೆರೆಯುತ್ತಿದ್ದರು. ಉತ್ತಮ ಕಾರ್ಯ ನಿರ್ವಹಿಸಿ ಹೆಸರು ಮಾಡಿದ್ದರು. ಮಂಗಳವಾರ ಅವರು ಕೆಲಸಕ್ಕೆ ಹೋಗಬೇಕಿತ್ತು. ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ತಿಳಿದ ಗೆಳತಿಯರು ಮತ್ತು ಜತೆಗೆ ಕೆಲಸ ಮಾಡಿದವರು ಕೆಎಂಸಿಆರ್‌ಐ ಶವಾಗಾರದಲ್ಲಿ ಶವ ನೋಡಿ ಗೋಗರೆಯುತ್ತಿದ್ದರು. ಐದೈದು ನಿಮಿಷಕ್ಕೊಮ್ಮೆ ಮುಖ ತೊಳೆದು ನೀಟಾಗಿರುತ್ತಿದ್ದ ಅಂಜಲಿ ಮುಖ ಗುರುತು ಸಿಗಲಾರದಂತಾಗಿದೆ ಎಂದು ಹೇಳುತ್ತ ಕಣ್ಣೀರು ಹಾಕುತ್ತಿದ್ದರು ಗೆಳ‍ತಿಯರು.

ಒಂದು ಗಂಟೆ ಮೊದ್ಲು ಸಿಕ್ಕಿದ್ದರು: ವಿಠ್ಠಲ ಶೆಟ್ಟಿ ಅವರ ಸ್ನೇಹಿತ ಪ್ರಕಾಶ್‌ ಶೆಟ್ಟಿ ಅವರೂ ಕುಳಗೇರಿ ಕ್ರಾಸ್‌ನಲ್ಲಿ ಹೋಟೆಲ್‌ ನಡೆಸುತ್ತಾರೆ. ಇವರು ಕುಳಗೇರಿಯಿಂದ ಸಾಗರಕ್ಕೆ ಹೊರಟಿದ್ದರು. ಈ ವೇಳೆ ವರೂರು ಬ‍ಳಿಯ ಹೋಟೆಲ್‌ನಲ್ಲಿ ವಿಠ್ಠಲ ಶೆಟ್ಟಿ ಕುಟುಂಬದವರು ತಿಂಡಿ ಮಾಡಿ ಕಾರ್‌ ಹತ್ತುತ್ತಿದ್ದರು. ಈ ವೇಳೆ ಅವರನ್ನು ಕಂಡ ಪ್ರಕಾಶ ಶೆಟ್ಟಿ ಮಾತನಾಡಿಸಿದಾಗ ನಿಶ್ಚಿತಾರ್ಥದ ವಿಷಯವನ್ನು ಖುಷಿ ಖುಷಿಯಾಗೇ ಹೇಳಿಕೊಂಡಿದ್ದರು. ಬಳಿಕ ಅವರು ಅಲ್ಲಿಂದ ಹೊರಟ ಒಂದು ತಾಸಿನಲ್ಲಿ ಅಪಘಾತ ನಡೆದು ಮೃತಪಟ್ಟಿರುವುದು ತಿಳಿದು ವಿಷಾದ ವ್ಯಕ್ತಪಡಿಸುತ್ತಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!