ದೊಡ್ಡಬಳ್ಳಾಪುರ ನಗರ ದೇವತೆ ಮುತ್ಯಾಲಮ್ಮ ಜಾತ್ರೆ ಸಂಭ್ರಮ

KannadaprabhaNewsNetwork | Published : May 7, 2025 12:45 AM
Follow Us

ಸಾರಾಂಶ

ಈ ಬಾರಿಯ ವಿಶೇಷವಾಗಿ ನಗರದೇವತೆ ಮುತ್ಯಾಲಮ್ಮ ದೇವಿ ಮೂಲ ವಿಗ್ರಹಕ್ಕೆ ಆದಿಶಕ್ತಿ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ರೂಪಿಸಲಾಗಿದ್ದ ಈ ಅಲಂಕಾರ ಭಕ್ತಾದಿಗಳ ವಿಶೇಷ ಆಕರ್ಷಣೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಇಲ್ಲಿನ ಶಾಂತಿನಗರದಲ್ಲಿರುವ ನಗರ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಜನರು ಭಾಗಿಯಾಗಿ ಭಕ್ತಿಭಾವ ಮೆರೆದರು.

ಆರತಿ ಉತ್ಸವದ ಭಾಗವಾಗಿ ದೊಡ್ಡಬಳ್ಳಾಪುರ ನಗರ, ಶಾಂತಿನಗರ, ದರ್ಗಾಜೋಗಿಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ, ಕುರುಬರಹಳ್ಳಿ ಮತ್ತು ರೋಜಿಪುರ ಗ್ರಾಮಗಳಿಂದ ನೂರಾರು ಮಹಿಳೆಯರು ಹೊಂಬಾಳೆ ಹಾಗೂ ತಂಬಿಟ್ಟಿನ ಆರತಿಗಳನ್ನು ಮೆರವಣಿಗೆಯಲ್ಲಿ ತಂದು ಶ್ರೀಮಾತೆಗೆ ಅರ್ಪಿಸಿದರು.

ರಥೋತ್ಸವದಲ್ಲಿ ಸಹಸ್ರಾರು ಜನ ಭಾಗಿ:

ಶ್ರೀ ಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಜಾತ್ರಾ ಮಹೋತ್ಸವದ ಭಾಗವಾಗಿ ಮಂಗಳವಾರ ಬೆಳಗ್ಗೆ 10.30ಕ್ಕೆ ದೇವಾಲಯದಿಂದ ರಥೋತ್ಸವ ಆರಂಭವಾಯಿತು. ಶಾಂತಿನಗರ ಮುಖ್ಯರಸ್ತೆ ಮೂಲಕ ಮುಗುವಾಳಪ್ಪ ವೃತ್ತದವರೆಗೆ ಸಂಚರಿಸಿ ಬಳಿಕ ದೇವಾಲಯಕ್ಕೆ ಹಿಂತಿರುಗಿತು. ವಿವಿಧೆಡೆ ಅರವಂಟಿಕೆಗಳು ಆಯೋಜನೆಗೊಂಡಿದ್ದವು. ಸಹಸ್ರಾರು ಜನರು ಪಾಲ್ಗೊಂಡು ಮುತ್ಯಾಲಮ್ಮ ದೇವಿ ಹಾಗೂ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ, ಆರತಿಗಳನ್ನು ಅರ್ಪಿಸಿದರು.

ರಥೋತ್ಸವ ವೇಳೆ ಹಲವು ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದವು. ಡೊಳ್ಳುಕುಣಿತ, ಶಿವತಾಂಡವ, ವೀರಗಾಸೆ, ಭದ್ರಕಾಳಿ, ಗಾರುಡಿ ಗೊಂಬೆಗಳು, ಮರಗಾಲು ಮನುಷ್ಯ, ವೀರಭದ್ರನ ಕುಣಿತ, ಪೂಜಾ ಕುಣಿತ, ತಮಟೆ, ಡ್ರಮ್ಸ್ ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿದ್ದವು.

ರಥೋತ್ಸವ ಮತ್ತು ಜಾತ್ರೆ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಇಡೀ ಆವರಣವನ್ನು ವಿದ್ಯುದ್ದೀಪಾಲಂಕಾರದಿಂದ ಆಕರ್ಷಣೀಯಗೊಳಿಸಲಾಗಿದೆ.

ಗಮನ ಸೆಳೆದ ಆದಿಶಕ್ತಿ ಅಲಂಕಾರ:

ಈ ಬಾರಿಯ ವಿಶೇಷವಾಗಿ ನಗರದೇವತೆ ಮುತ್ಯಾಲಮ್ಮ ದೇವಿ ಮೂಲ ವಿಗ್ರಹಕ್ಕೆ ಆದಿಶಕ್ತಿ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ರೂಪಿಸಲಾಗಿದ್ದ ಈ ಅಲಂಕಾರ ಭಕ್ತಾದಿಗಳ ವಿಶೇಷ ಆಕರ್ಷಣೆಗೆ ಪಾತ್ರವಾಯಿತು.

ಇಂದು ಹಗಲು ಪರಿಷೆ:

ಜಾತ್ರೆಯ ಅಂಗವಾಗಿ ಬುಧವಾರ ಹಗಲು ಪರಿಷೆ ನಡೆಯಲಿದೆ. ಜಾತ್ರೆಯಲ್ಲಿ ಹತ್ತಾರು ಅಂಗಡಿ ಮಳಿಗೆಗಳು ತಲೆಯೆತ್ತಿದ್ದು, ಆಟಿಕೆಗಳು, ತರಾವರಿ ಕ್ರೀಡಾ ಚಟುವಟಿಕೆಗಳು ಗಮನ ಸೆಳೆಯುತ್ತಿವೆ. ದೇವಾಲಯದ ಆವರಣದಲ್ಲಿ ವಿವಿಧ ದೇವರುಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಆಕರ್ಷಣೀಯವಾಗಿದೆ.

ವಿವಿಧೆಡೆ ಅರವಂಟಿಗೆ:

ಇಲ್ಲಿನ ಶಾಂತಿನಗರ 7ನೇ ಕ್ರಾಸ್‌ ಶ್ರೀ ಮುತ್ಯಾಲಮ್ಮ ಸೇವಾ ಸಮಿತಿಯ ನೇತೃತ್ವದಲ್ಲಿ ಜಾತ್ರೆ ಮಹೋತ್ಸವ ಅಂಗವಾಗಿ 2ನೇ ವರ್ಷದ ಅರವಂಟಿಗೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ಸಾವಿರಾರು ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಅನ್ನಪ್ರಸಾದ ವಿತರಣೆ ಮಾಡಲಾಯಿತು.