50:50 ಅನುಪಾತ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ಎಂಡಿಎ ಆಯುಕ್ತರ ವರ್ಗಾವಣೆ

KannadaprabhaNewsNetwork | Published : Jul 2, 2024 1:33 AM

ಸಾರಾಂಶ

50:50 ನಿವೇಶನ ಹಂಚಿಕೆಯ ಅಕ್ರಮ ಕುರಿತು 4 ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆ ವಿಷಯದಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಮತ್ತು ಎಇಇ ವರ್ಗಾಯಿಸಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆದೇಶಿಸಿದ್ದಾರೆ.ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಷ್ಪಕ್ಷವಾದ ತನಿಖೆಗಾಗಿ ಅಧಿಕಾರಿಗಳನ್ನು ವರ್ಗಾಯಿಸುವಂತೆ ಮೌಖಿಕ ಆದೇಶ ನೀಡಿದರು.50:50 ನಿವೇಶನ ಹಂಚಿಕೆಯ ಅಕ್ರಮ ಕುರಿತು 4 ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಿದರು. ಇಬ್ಬರು ಐಎಎಸ್ ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ಅವರಿಂದ ತನಿಖೆ ನಡೆಸಲು ಸೂಚಿಸಲಾಗಿದೆ. ಮುಂದಿನ ಒಂದು ತಿಂಗಳು ಯಾವುದೇ ನಿವೇಶನ ಹಂಚಿಕೆ, ಎಂಡಿಎ ಸಭೆ ಮಾಡುವಂತಿಲ್ಲ. ಈ ಹಿಂದೆ ಹಂಚಿಕೆಯಾದ ಎಲ್ಲಾ ನಿವೇಶನಗಳ ಆದೇಶವನ್ನು ತಡೆ ಹಿಡಿಯಲಾಗುತ್ತದೆ ಎಂದರು.ಇದಕ್ಕೂ ಮುನ್ನ ಪ್ರಕರಣ ಸಂಬಂಧ ಎಂಡಿಎ ಆಯುಕ್ತ ದಿನೇಶ್ ಕುಮಾರ್ ಅವರಿಂದಲೇ ಮಾಹಿತಿ ಪಡೆದರು. ಎಂಡಿಎ ನಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ಆದ್ದರಿಂದ ಇಲ್ಲಿಯೇ ಸಭೆ ನಡೆಸಿದ್ದೇನೆ. ಹಲವು ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಏಳು ತಿಂಗಳ ಹಿಂದೆ ನಾನೇ ತುಂಡು ಭೂಮಿ ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಆದೇಶಗಳನ್ನ ರದ್ದು ಮಾಡಲು ಸೂಚಿಸಿರುವುದಾಗಿ ಅವರು ಹೇಳಿದರು.ಈ ಘಟನೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಇರುವುದು ಈ ಕ್ಷಣದಲ್ಲಿ ಕಂಡು ಬಂದಿಲ್ಲ. ಯತೀಂದ್ರ ಅವರು ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದರು ಇದಕ್ಕೂ ಅವರಿಗೂ ಸಂಬಂಧವಿಲ್ಲ. ಎಚ್. ವಿಶ್ವನಾಥ್ ಅವರು ನಮಗಿಂತ ಹಿರಿಯರು. ಅವರ ಬಳಿ ಯಾವುದಾದರು ಸಾಕ್ಷಿ ಇದಿಯಾ ಯತೀಂದ್ರ ಬಗ್ಗೆ ಹೇಳುವುದಕ್ಕೆ ಎಂದು ಅವರು ಪ್ರಶ್ನಿಸಿದರು.ವಿಶ್ವನಾಥ್ ಅವರ ಹೇಳಿಕೆಯನ್ನ ದೇವರೆ ನೋಡಿಕೊಳ್ಳಬೇಕು. ವಿಶ್ವನಾಥ್ ಅವರ ಬಳಿ ಸಾಕ್ಷಿ ಇದ್ದರೆ ತಂದು ಕೊಡಲಿ ಎಂದ ಅವರು, ಪೆನ್ ಡ್ರೈವ್ ಮೂಲಕ ಎಂಡಿಎ ದಾಖಲಾತಿ ಕೇಳಿದ ವಿಶ್ವನಾಥ್ ಗೆ ಟಾಂಗ್ ನೀಡಿದರು.ನಮ್ಮಲ್ಲಿ ಪೆನ್ ಡ್ರೈವ್ ಸಂಸ್ಕೃತಿ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಈಗ ಮಾತನಾಡುತ್ತಿದ್ದಾರೆ. ನನ್ನ ಬಳಿ ಸೈಟ್ ಕೊಡಿಸುವಂತೆ ಅವರು ಬಂದಿದ್ದರು. ಅದನ್ನ ನೆನಪು ಮಾಡಿಕೊಳ್ಳಲಿ. ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 87ರ ಅನ್ವಯ 50-50 ಅನುಪಾತದಲ್ಲಿ ನಿಯಮ ಬಾಹಿರ ಹಂಚಿಕೆಯನ್ನು ರದ್ದುಪಡಿಸಲು ಆದೇಶಿಸಲಾಗಿದೆ. 50-50 ಅನುಪಾತ ಜಾರಿಗೆ ಬಂದಿದ್ದು 2020ನೇ ಇಸವಿಯಲ್ಲಿ. ಜಾಗ ನೀಡಲು ಕ್ಯಾಬಿನೆಟ್ ಸಮ್ಮತಿ ಬೇಕು ಎಂದು ನಿಯಮವಿದೆ. ಆದರೆ ಈವರೆಗೆ ಎಂಡಿಎ ನೀಡಿರುವ ಜಾಗಕ್ಕೆ ಯಾವುದೇ ಕ್ಯಾಬಿನೆಟ್ ತೀರ್ಮಾನ ಆಗಿಲ್ಲ. ಇದೇ ನಿಯಮದಲ್ಲಿ ಎಂಡಿಎ ಅಧಿಕಾರಿಗಳು ಸಾಕಷ್ಟು ಸೈಟ್ ನೀಡಿದ್ದಾರೆ. ಇಲ್ಲಿ ಎಷ್ಟು ಅಕ್ರಮ ಆಗಿದೆ ಅಂತ ಗೊತ್ತಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ತನಿಖೆ ನಡೆಸಲಾಗುತ್ತಿದೆ ಎಂದರು.ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಈ ನಿಯಮ ಜಾರಿಗೆ ತಂದಿದೆ. ಅಲ್ಲಿಂದ ಏನು ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದರು. ಸಿಎಂ ಸ್ಥಾನ ಖಾಲಿ ಇಲ್ಲಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ಡಿಸಿಎಂ ಸ್ಥಾನ ಕೂಡ ಖಾಲಿ ಇಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು. ಬಿಗಿ ಬಂದೋಬಸ್ತ್ಎಂಡಿಎಗೆ ಸಚಿವ ಬೈರತಿ ಸುರೇಶ್ಭೇಟಿ ಹಿನ್ನೆಲೆಯಲ್ಲಿ ಎಂಡಿಎ ಕಚೇರಿಗೆ ಬಿಗಿ ಪೊಲೀಸ್ಬಂದೋಬಸ್ತ್ ನಿಯೋಜಿಸಲಾಗಿತ್ತು. ಇಬ್ಬರು ಎಸಿಪಿ, ನಾಲ್ವರು ಇನ್ಸ್ಪೆಕ್ಟರ್, ಐವರು ಎಸ್ಐ ನೇತೃತ್ವದಲ್ಲಿ ಬಂದೋಬಸ್ತ್ಕಲ್ಪಿಸಲಾಗಿತ್ತು.----- ಬಾಕ್ಸ್ ಸುದ್ದಿ---- ಮಾಹಿತಿ ಕೇಳಿದ ಎಚ್. ವಿಶ್ವನಾಥ್-- ಎಂಡಿಎನಲ್ಲಿ 50:50 ಅನುಪಾತದ ನೆಪದಲ್ಲಿ ಬಹುಕೋಟಿ ಹಗರಣ ನಡೆದಿರುವ ಕುರಿತು ಮಾಹಿತಿ ಕಲೆಹಾಕಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮುಂದಾಗಿದ್ದಾರೆ.ಜಿಲ್ಲಾ ನೋಂದಣಾಧಿಕಾರಿ, ಎಂಡಿಎ ನೋಂದಣಾಧಿಕಾರಿಗೆ ಪತ್ರ ಬರೆದಿರುವ ಅವರು, 2020ರ ಜನವರಿಯಿಂದ ಇಂದಿನವರೆಗೂ ಎಂಡಿಎಯಲ್ಲಿ ನೋಂದಣಿ ಬಗ್ಗೆ ಮಾಹಿತಿ ಪೆನ್ಡ್ರೈವ್ ನಲ್ಲಿ ಮಾಹಿತಿ ನೀಡುವಂತೆ ನೀಡುವಂತೆ ಕೋರಿದ್ದಾರೆ.

Share this article