ಮತ್ತೆ ೩ ತ್ಯಾಜ್ಯ ತುಂಬಿದ ವಾಹನ ಪತ್ತೆ; ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

KannadaprabhaNewsNetwork | Published : Nov 5, 2024 12:41 AM

ಸಾರಾಂಶ

ಕೇರಳ ರಾಜ್ಯದಿಂದ ತ್ಯಾಜ್ಯ ತುಂಬಿದ ಮೂರು ವಾಹನಗಳನ್ನು ಭಾನುವಾರ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯ ಬೆನ್ನಲ್ಲೇ ಮತ್ತೆ ಮೂರು ತ್ಯಾಜ್ಯವಿದ್ದ ವಾಹನಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ಪಟ್ಟಣದ ಬಳಿಯ ಎಪಿಎಂಸಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೇರಳ ರಾಜ್ಯದಿಂದ ತ್ಯಾಜ್ಯ ತುಂಬಿದ ಮೂರು ವಾಹನಗಳನ್ನು ಭಾನುವಾರ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯ ಬೆನ್ನಲ್ಲೇ ಮತ್ತೆ ಮೂರು ತ್ಯಾಜ್ಯವಿದ್ದ ವಾಹನಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ಪಟ್ಟಣದ ಬಳಿಯ ಎಪಿಎಂಸಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕೇರಳ ಗಡಿಯಲ್ಲಿ ಅರಣ್ಯ ಹಾಗೂ ಪೊಲೀಸ್‌ ಚೆಕ್‌ ಪೋಸ್ಟ್‌ಗಳಿವೆ. ಬೆಳಗ್ಗೆ ೬ ರಿಂದ ರಾತ್ರಿ ೧೦ರ ತನಕ ಕರ್ತವ್ಯ ನಿರ್ವಹಿಸುತ್ತಿದ್ದರೂ ತ್ಯಾಜ್ಯ ತುಂಬಿದ ವಾಹನಗಳು ಗುಂಡ್ಲುಪೇಟೆ ಒಳಗೆ ನುಸುಳಿ ಬಂದಿವೆ ಎಂದರೆ ಅರಣ್ಯ ಮತ್ತು ಪೊಲೀಸ್‌ ಚೆಕ್‌ ಪೋಸ್ಟ್‌ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಾರ್ವಜನಿಕರಿಗೆ ಕೇರಳದಿಂದ ಬರುವ ತ್ಯಾಜ್ಯ ತುಂಬಿದ ವಾಹನಗಳ ಮಾಹಿತಿ ಸಿಗುತ್ತಿದೆ. ಚೆಕ್‌ ಪೋಸ್ಟ್‌ನ ಸಿಬ್ಬಂದಿಗೇಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ಮಾಡಹಳ್ಳಿ ಗ್ರಾಮದ ಬಳಿ ಬಿಜೆಪಿ ಮುಖಂಡ ನಾಗೇಂದ್ರ, ಜಯ ಕರ್ನಾಟಕ ಸಂಘಟನೆ ಮಹೇಶ್‌, ದಲಿತ ಸಂಘಟನೆ ಮುಖಂಡ ಮುತ್ತಣ್ಣ, ಗ್ರಾಮಸ್ಥರಾದ ಮಹೇಶ್‌, ಶೇಖರಪ್ಪ ಹಾಗೂ ಇನ್ನಿತರರು ಕೇರಳದ ೨ ಮತ್ತು ತಮಿಳುನಾಡಿನ ೧ ವಾಹನ ತಡೆದು ತಪಾಸಣೆ ನಡೆಸಿದಾಗ ತ್ಯಾಜ್ಯ ವಾಹನಗಳಲ್ಲಿ ಇದ್ದದ್ದು ಪತ್ತೆಯಾಗಿದೆ. ಸೋಮವಾರ ಮಧ್ಯಾಹ್ನ ಪಟ್ಟಣದ ಬಳಿಯ ಎಪಿಎಂಸಿಯ ಬಳಿ ಎರಡು ವಾಹನಗಳನ್ನು ತಡೆದು ಮಾಡ್ರಹಳ್ಳಿ ಮಹೇಶ್‌ ಹಾಗೂ ಜಯ ಕರ್ನಾಟಕ ಸಂಘಟನೆಯ ಮಹೇಶ್‌ ಮತ್ತಿತರರು ತಪಾಸಣೆ ನಡೆಸಿದಾಗ ತ್ಯಾಜ್ಯವಿತ್ತು. ಬಳಿಕ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡು ಭಾನುವಾರ ಸಿಕ್ಕ ೩ ವಾಹನಗಳ ಮೇಲೆ ಕೇಸು ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ದಂಡ ಕಟ್ಟಿಸಿ ವಾಹನಗಳನ್ನು ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share this article