ಕಲಬುರಗಿಯಲ್ಲೂ ಭುಗಿಲೆದ್ದ ಜನಿ‘ವಾರ್‌’

KannadaprabhaNewsNetwork | Updated : May 05 2025, 07:15 AM IST

ಸಾರಾಂಶ

 ಕಲಬುರಗಿಯಲ್ಲಿ  ನಡೆದ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ಅರ್ಹತಾ ಪರೀಕ್ಷೆ ‘ನೀಟ್‌’ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

 ಕಲಬುರಗಿ : ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ಭುಗಿಲೆದ್ದ ಜನಿವಾರ ಗದ್ದಲ ಪೂರ್ಣವಾಗಿ ತಣ್ಣಗಾಗುವ ಮೊದಲೇ ಕಲಬುರಗಿಯಲ್ಲಿ ಭಾನುವಾರ ನಡೆದ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ಅರ್ಹತಾ ಪರೀಕ್ಷೆ ‘ನೀಟ್‌’ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ವಿಪ್ರ ಸಮಾಜದವರು, ಬಿಜೆಪಿ ಮುಖಂಡರು ಪರೀಕ್ಷಾ ಕೇಂದ್ರದ ಹೊರಗೆ ಮೂರು ತಾಸು ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿದ್ದಾರೆ. ಜನಿವಾರ ತೆಗೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆದಿದೆ.

ಪರೀಕ್ಷೆ ಮುಗಿಸಿ ವಿದ್ಯಾರ್ಥಿ ಹೊರಬಂದ ಬಳಿಕ ಪರೀಕ್ಷಾ ಕೇಂದ್ರದ ಮುಂದಿನ ರಸ್ತೆಯಲ್ಲಿಯೇ ಹೋಮಾದಿಗಳನ್ನು ಮಾಡಿ, ಶಾಸ್ತ್ರೋಕ್ತವಾಗಿ ಯಜ್ಞೋಪವೀತ ಧಾರಣೆ ಮಾಡಲಾಗಿದೆ.

ರಾದ್ಧಾಂತ:

ಸಿಇಟಿ ವೇಳೆ ಬೀದರ್‌ನಲ್ಲಿ ಜನಿವಾರ ತೆಗೆಯಲು ಸೂಚಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನೇ ಬಹಿಷ್ಕರಿಸಿದ ಹಾಗೂ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆ ಬರೆದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕಲಬುರಗಿಯಲ್ಲಿ ಭಾನುವಾರ ನಡೆದ ವೈದ್ಯ ಕೋರ್ಸ್‌ ಪ್ರವೇಶ ಪರೀಕ್ಷೆ ‘ನೀಟ್’ ವೇಳೆಯೂ ಅಂತಹುದೇ ಘಟನೆ ಮರುಕಳಿಸಿತು.

ನಗರದ ಸೇಂಟ್ ಮೇರಿಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೀಟ್ ಬರೆಯಲು ಬಂದ ಚಿಂಚೋಳಿ ಮೂಲದ ಶ್ರೀಪಾದ ಸುಧೀರ್ ಪಾಟೀಲ್ ಎಂಬ ವಿದ್ಯಾರ್ಥಿಯನ್ನು ತಪಾಸಣೆಗೊಳಪಡಿಸಿದ ಸಿಬ್ಬಂದಿ, ಆತ ಜನಿವಾರ ಧರಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ಅಲ್ಲದೆ, ಅದನ್ನು ತೆಗೆಯುವಂತೆ ತಾಕೀತು ಮಾಡಿದರು ಎನ್ನಲಾಗಿದೆ. ಆಗ ಶ್ರೀಪಾದ ಪಾಟೀಲ್‌ ಅನಿವಾರ್ಯವಾಗಿ ಜನಿವಾರ ತೆಗೆದು ಪರೀಕ್ಷಾ ಕೇಂದ್ರದೊಳಗೆ ತೆರಳಿದರು ಎಂದು ಗೊತ್ತಾಗಿದೆ.

ಪ್ರತಿಭಟನೆ: ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ವಿಪ್ರ ಸಮಾಜದ ಮುಖಂಡರು ಪರೀಕ್ಷಾ ಕೇಂದ್ರದ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಬಿಜೆಪಿಗರೂ ಸಾಥ್‌ ನೀಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ, ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ಬಂದ್‌ ಆಗಿತ್ತು. ಶಾಸಕ ಅಲ್ಲಮಪ್ರಭು ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿದರು.

ಬಳಿಕ, ಪ್ರತಿಭಟನಾಕಾರರು ಹಾಗೂ ಪೊಲೀಸರ ಸಮ್ಮುಖದಲ್ಲಿಯೇ ಪರೀಕ್ಷಾ ಕೇಂದ್ರದ ಮುಂದಿನ ರಸ್ತೆಯಲ್ಲಿಯೇ ಹೋಮಾದಿಗಳನ್ನು ಮಾಡಿ, ಜನಿವಾರ ತೆಗೆದು ಪರೀಕ್ಷೆಗೆ ಹೋಗಿದ್ದ ವಿದ್ಯಾರ್ಥಿಗೆ ಶಾಸ್ತ್ರೋಕ್ತವಾಗಿ ಯಜ್ಞೋಪವೀತ ಧಾರಣೆ ಮಾಡಲಾಯಿತು. ಉತ್ತರಾದಿ ಮಠಾಧಿಕಾರಿ ರಾಮಾಚಾರ್‌ ಘಂಟೆ ನೇತೃತ್ವದಲ್ಲಿ ಯಜ್ಞೋಪವೀತ ಧಾರಣಾ ಕಾರ್ಯಕ್ರಮ ನಡೆಯಿತು.

ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಹಾಗೂ ಜಂಟಿ ಕಾರ್ಯದರ್ಶಿ, ಜಿಲ್ಲಾ ಪ್ರತಿನಿಧಿ ಪ್ರಮೋದ ದೇಶಪಾಂಡೆ ಆಡಕಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಶ್ರೀಪಾದ ಸುಧೀರ್ ಪಾಟೀಲ್ ಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ತಹಸೀಲ್ದಾರ್‌ ಕೆ.ಆನಂದ್‌ ಶೀಲ್‌, ಪರೀಕ್ಷಾ ಕೇಂದ್ರದೊಳಗಿನ ಘಟನಾವಳಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡಿದ್ದೇನೆ. ತಪಾಸಣೆ ವೇಳೆ ಈತನ ಮುಂದಿದ್ದ ವಿದ್ಯಾರ್ಥಿ ಲೋಹದ ಲಿಂಗ ಧರಿಸಿದ್ದು ಪತ್ತೆಯಾಗಿದೆ. ಅದಕ್ಕೆ ಅವಕಾಶ ನೀಡಲಿಲ್ಲ. ಈ ವಿದ್ಯಾರ್ಥಿ ತಪಾಸಣೆ ವೇಳೆ ಜನಿವಾರ ಎಂದು ಸ್ಪಷ್ಟವಾಗಿ ಹೇಳಿಲ್ಲ. ದಾರವಿದೆ ಎಂದಿದ್ದರಿಂದ ಅಲ್ಲಿನ ಸಿಬ್ಬಂದಿ ತೆಗೆದು ಬಾ ಎಂದಿದ್ದಾರೆ. ಆತ ತನ್ನ ತಂದೆಗೆ ಅದನ್ನು ತೆಗೆದುಕೊಟ್ಟು ಬಂದಿದ್ದಾನೆ. ತಪಾಸಣೆ ನಡೆಸಿದವರಿಂದಲೂ ವಿವರಣೆ ಕೇಳಲಾಗಿದೆ ಎಂದು ತಿಳಿಸಿದರು.

ನನ್ನ ಮಗ ನೀಟ್‌ ಪರೀಕ್ಷೆ ಬರೆಯಲು ಬಂದಾಗ ಜನಿವಾರದ ಬಗ್ಗೆ ಆಕ್ಷೇಪಿಸಿದ್ದಾರೆ. ಅದೆಷ್ಟೇ ಮನವಿ ಮಾಡಿದರೂ ಸಿಬ್ಬಂದಿ ಕೇಳಿಲ್ಲ. ಹೀಗಾಗಿ, ನನ್ನ ಮಗ ಜನಿವಾರ ತೆಗೆದು ನನ್ನ ಕೈಗೆ ಕೊಟ್ಟು ಹೋಗಿದ್ದಾನೆ. ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.

- ಸುಧೀರ ಪಾಟೀಲ್‌, ವಿದ್ಯಾರ್ಥಿಯ ತಂದೆ.

ಗೊಂದಲಕ್ಕೆ ಒಳಗಾಗಿ ನೋಂದಣಿ ಸಂಖ್ಯೆ

ತಪ್ಪಾಗಿ ಬರೆದಿದ್ದೇನೆ ಪರೀಕ್ಷೆಗೆ ಹೋಗುವಾಗ ದಾರ ತೆಗೆದಿಟ್ಟು ಬಾ ಅಂದಾಗ ನಾನು ಜನಿವಾರ ತೆಗೆದು ಅಪ್ಪನ ಕೈಗೆ ಕೊಟ್ಟು ಬಂದೆ. ಇದರಿಂದಾಗಿ ನಾನು ಮಾನಸಿಕವಾಗಿ ಗೊಂದಲಕ್ಕೊಳಗಾದೆ. ಓಎಂಆರ್‌ ಶೀಟ್‌ನಲ್ಲಿ ನೋಂದಣಿ ಸಂಖ್ಯೆಯನ್ನು ಕೂಡ ತಪ್ಪಾಗಿ ಬರೆದೆ. ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಹೀಗಾಗಿ, ನನಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.

- ಶ್ರೀಪಾದ ಸುಧೀರ್ ಪಾಟೀಲ್, ನೀಟ್‌ ವಿದ್ಯಾರ್ಥಿ

Share this article