ಮಾಗಡಿ: ತಾಲೂಕಿನ ಅಗಲಕೋಟೆ ಶ್ರೀ ವಿನಾಯಕ ಸೂತ್ರದ ಬೊಂಬೆ ಮೇಳ ತಂಡ ನಾಯಕ ಎ.ಆರ್.ಸತ್ಯನಾರಾಯಣ ತಮ್ಮ ಕುಟುಂಬದ ತಲೆಮಾರುಗಳಿಂದ ಬೆಳೆಸಿಕೊಂಡು ಬಂದ ಸೂತ್ರದ ಬೊಂಬೆ ಆಟವನ್ನು ಪ್ರದರ್ಶನವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಜತೆಗೆ ಇಂದಿನ ಪೀಳಿಗೆಗೆ ಸೂತ್ರದ ಗೊಂಬೆಯ ಪರಿಚಯವನ್ನು ಮಾಡಿಕೊಡುತ್ತಿರುವುದು ವಿಶೇಷವಾಗಿದೆ.
ಸೂತ್ರದ ಬೊಂಬೆ ಇತಿಹಾಸ: ಎರಡು ತಲೆಮಾರಿನ ಸಲಾಕೆ ಬೊಂಬೆಯಾಟದ ಕಲೆ ಇನ್ನೂರು ವರ್ಷಗಳ ಇತಿಹಾಸವಿದ್ದು, ನರ್ತನ ಶಿರೋಮಣಿ ಇತ್ಯಾದಿ ಬಿರುದಾಂಕಿತರಾದ ದಿ. ಎ.ವಿ. ನರಸಿಂಗರಾಯರ ಮೊಮ್ಮಗನಾದ ದಿ. ಎ.ಆರ್.ರಂಗನಾಥ ರಾವ್‌ಗೆ ಈ ಬೊಂಬೆ ಆಟದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ದೊರಕಿದ್ದು, ಇವರ ಸಹೋದರ ದಿ.ಎಂ.ಆರ್. ರಾಮಯ್ಯರ ಮಗನಾದ ಎ.ಆರ್. ಸತ್ಯನಾರಾಯಣ ಈ ಬೊಂಬೆಯಾಟದ ಕಲೆಯನ್ನು 40 ವರ್ಷಗಳಿಗೂ ಮಿಗಿಲಾಗಿ ಕರಗತ ಮಾಡಿಕೊಂಡಿದ್ದಾರೆ.
ಸತ್ಯನಾರಾಯಣ ನಮ್ಮ ತಂಡದೊಡನೆ ನವದೆಹಲಿ, ಚೆನ್ನೈ, ತಿರುಪತಿ, ಮೊದಲಾದ ಪ್ರಮುಖ ಸ್ಥಳಗಳಷ್ಟೆ ಅಲ್ಲದೆ ಕರ್ನಾಟಕದಾದ್ಯಂತ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕರ್ನಾಟಕದಲ್ಲಿ ಹಿಂದೆ ರಾಜ್ಯಪಾಲರಾಗಿದ್ದ ಅಶೋಕನಾಥ್ ಬ್ಯಾನರ್ಜಿ ಸಮ್ಮುಖದಲ್ಲಿಯೂ ಪ್ರದರ್ಶನವನ್ನು ನೀಡಿ ಅವರ ಮೆಚ್ಚುಗೆಗೂ ಪಾತ್ರರಾದ್ದಾರೆ. ಇವರು ಬೊಂಬೆಗಳನ್ನು ಆಡಿಸುವುದಲ್ಲದೆ ಪ್ರಸಂಗಗಳಿಗೆ ಸೂಕ್ತವಾದ ಬೊಂಬೆಗಳನ್ನು ಸ್ವತಹ ಮಾಡಿಕೊಳ್ಳುವುದರಲ್ಲಿಯೂ ಶುದ್ಧ ಹಸ್ತನಾಗಿದ್ದಾರೆ. ಇವರ ಬಳಿ ಇರುವ ಬೊಂಬೆಗಳು ಕರ್ನಾಟಕದಲ್ಲಿರುವ ಎಲ್ಲಾ ಬೊಂಬೆಗಳ ಪೈಕಿ ಅತ್ಯಂತ ಪ್ರಾಚೀನವಾದ ಹಾಗೂ ಸುಂದರವಾಗಿರುತ್ತವೆ. ಬೊಂಬೆಗಳ ಚಿತ್ರಗಳನ್ನು ಅನೇಕ ವಿದೇಶಿಯರು ಚಿತ್ರಿಸಿಕೊಂಡು ತಾವು ಬರೆದಿರುವ ಪುಸ್ತಕಗಳಲ್ಲಿ ಪ್ರಕಟಿಸಿರುತ್ತಾರೆ.ಇಂದಿನ ತಾಂತ್ರಿಕ ಯುಗದಲ್ಲಿಯೂ ಸಮಷ್ಟಿ ಕುಟುಂಬದಲ್ಲಿರುವ ಇವರ ಮಕ್ಕಳು, ಮೊಮ್ಮಕ್ಕಳಾದಿಯಾಗಲಿ ಎಲ್ಲರೂ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕಾರಣಗಳಿಂದ ಈ ಅಪರೂಪದ ಗೊಂಬೆಯಾಟದ ಕಲೆಯ ಕೊಂಡಿ ಕಳಚದೆ ಮುಂದುವರೆಸಿಕೊಂಡು ಹೋಗುವ ಮನೆತನ ಇವರದಾಗಿದೆ.