ಮಕ್ಕಳಲ್ಲಿ ಹಲ್ಲೆ ಮನಸ್ಥಿತಿ ಅಪಾಯಕಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

KannadaprabhaNewsNetwork |  
Published : Mar 01, 2026, 01:45 AM IST
ಪೋಟೋ: 28ಎಸ್‌ಎಂಜಿಕೆಪಿ08ಶಿವಮೊಗ್ಗ ನಗರದ ಹೊರವಲಯದ ಊರುಗಡೂರಿನಲ್ಲಿ ಹತ್ಯೆಯಾದ ಸಂಕೇತ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಈ ರೀತಿ ಮನೋಭಾವ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಳೆಯ ವಯಸ್ಸಿನಲ್ಲಿ ಗಲಾಟೆ ಮಾಡಿ ಹತ್ಯೆ ಮಾಡುವ ಮನಸ್ಥಿತಿ ಮೂಡಿರುವುದು ನಿಜಕ್ಕೂ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳಲ್ಲಿ ಈ ರೀತಿ ಮನೋಭಾವ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಳೆಯ ವಯಸ್ಸಿನಲ್ಲಿ ಗಲಾಟೆ ಮಾಡಿ ಹತ್ಯೆ ಮಾಡುವ ಮನಸ್ಥಿತಿ ಮೂಡಿರುವುದು ನಿಜಕ್ಕೂ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ಹೊರವಲಯದ ಊರುಗಡೂರಿನಲ್ಲಿ ಹತ್ಯೆಯಾದ ವಿದ್ಯಾರ್ಥಿ ಸಂಕೇತ್ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕನ ಹತ್ಯೆ ಮಾಡುವ ಹಂತಕ್ಕೆ ಹೋಗಿದ್ದಾರೆ ಎಂದರೆ ಇಂಥ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿದೆ. ಯಲ್ಲಾಪುರದಲ್ಲಿ ಹಿಂದೂ ಮಹಿಳೆಯ ಹತ್ಯೆಯಾಯಿತು. ಯಾವ ಕಾರಣದಿಂದ ಈ ರೀತಿ ಮನೋಭಾವನೆ ಬೆಳೆಯುತ್ತಿದೆ ಅದನ್ನು ಕೂಡ ಯೋಚನೆ ಮಾಡುವ ಸ್ಥಿತಿ ಉಲ್ಬಣಿಸಿದೆ ಎಂದರು.

ಮಂಗಳೂರಿನಲ್ಲಿ ಅನ್ಯಕೋಮಿನ ಸಾವಾದಾಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಅವರ ಕುಟುಂಬಸ್ಥರಿಗೆ 25 ಲಕ್ಷ , 50 ಲಕ್ಷ ರು. ಪರಿಹಾರ ಕೊಟ್ಟಿದ್ದಾರೆ. ಯಲ್ಲಾಪುರದಲ್ಲೂ ಕೂಡ ಎಸ್ಸಿ, ಎಸ್ಟಿಗೆ ಎಷ್ಟು ಪರಿಹಾರ ಕೊಡಬಹುದು ಅಷ್ಟೇ ಕೊಟ್ಟಿದ್ದಾರೆ. ಸಂಕೇತ್ ಕುಟುಂಬ ಬಹಳ ಕಷ್ಟದ ಸ್ಥಿತಿಯಲ್ಲಿದೆ ಪರಿಹಾರ ಹೆಚ್ಚು ಕೊಡಬೇಕು. ಅವರಿಗೊಂದು ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.

ಕಾನೂನು ಸುವ್ಯವಸ್ಥೆಗೂ ತಮಗೂ ಸಂಬಂಧ ಇಲ್ಲದಂತೆ ಗೃಹ ಸಚಿವರು ನಡೆದುಕೊಳ್ಳುತ್ತಿದ್ದಾರೆ. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯಲ್ಲಿ ನಡೆದ ಘಟನೆ, ಮಡಿಕೇರಿಯಲ್ಲಿನ ಅಹಿತಕರ ಘಟನೆಗಳು ನಡೆದಿವೆ. ಎಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರವಿರುತ್ತದೆಯೋ ಅಲ್ಲಿವರೆಗೂ ಕಡಿವಾಣ ಹಾಕಲು ಆಗೋಲ್ಲ ಎಂಬ ಸ್ಥಿತಿ ಇದೆ. ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆಗಳು ಬರುವುದಿಲ್ಲ. ಇಲ್ಲಿ ಸಂಕೇತ್ ಹತ್ಯೆಯಾಗಿದೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ವ ಅವರಿಗೆ ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂಬ ಮನಸ್ಥಿತಿ ಇಲ್ಲ. ಮನುಷ್ಯತ್ವ ಇರುವ ಸರ್ಕಾರ ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ. ಉಸ್ತುವಾರಿ ಸಚಿವರು ಬಂದು ಈ ಕುಟುಂಬವನ್ನು ಭೇಟಿ ಮಾಡುವುದಿಲ್ಲ ಎಂದರೆ ಹೇಗೆ ?

ಅಧಿಕಾರದ ಮದದಿಂದ ಈ ರೀತಿ ನಡೆದು ಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಿತಿಮೀರಿ ಹೋಗಿದೆ. ಸಮಾಜದಲ್ಲಿ ಭಯ ಇಲ್ಲದಂತಾಗಿದೆ. ಎಲ್ಲದಕ್ಕೂ ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ಬೇಜವಾಬ್ದಾರಿತನವೇ ಕಾರಣ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಎಂದರೆ ಬೆಲೆ ಏರಿಕೆಯ ಗ್ಯಾರಂಟಿಯಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸಿ, ಬಡ ಜನತೆಗೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಆಡಳಿತ ಪಕ್ಷದ ಶಾಸಕರು ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಗ್ಯಾರೆಂಟಿಗಳನ್ನು ನಂಬಿಕೊಂಡು ಕೂರುವ ಸ್ಥಿತಿಯಲ್ಲಿ ಜನತೆಯನ್ನು ತಂದಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದರಿದ್ರ ಬಂದಂತಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಸಂಪೂರ್ಣ ಮರೆತು ಮುಖ್ಯಮಂತ್ರಿ ಕುರ್ಚಿಯ ಕಾಳಗ ಕಳೆದೊಂದು ವರ್ಷದಿಂದ ನಡೆದಿದೆ. ಶಾಸಕರ ವಿದೇಶ ಪ್ರವಾಸ ಒಂದೆಡೆಯಾದರೆ ಇನ್ನುಳಿದ ಶಾಸಕರ ದೆಹಲಿ ಪ್ರವಾಸ ಶುರುವಾಗಿದೆ. ಇವರ ಹಗ್ಗ ಜಗ್ಗಾಟದಲ್ಲಿ ಕೂಸು ಬಡವಾದಂತೆ ರಾಜ್ಯದ ಜನತೆ ಪರಿತಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಗಿರಿ ತಾಲೂಕಿನ 5 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಜಿಲ್ಲೆಯಲ್ಲಿ ಮೊದಲ ದಿನ ಪಿಯುಸಿ ಪರೀಕ್ಷೆ ಸುಗಮ