ತಾಯಿಯನ್ನು ನೋಡಲು ಹೊರಟ ಅಗ್ನಿವೀರ ರೈಲು ಡಿಕ್ಕಿ ಹೊಡೆದು ಸಾವು

KannadaprabhaNewsNetwork |  
Published : Sep 27, 2026, 02:30 AM IST
ಪೋಟೊ26ಕೆಎಸಟಿ4ಕುಷ್ಟಗಿ ತಾಲೂಕಿನ ಮಡಿಕೇರಿಯಲ್ಲಿ ಅಗ್ನಿವೀರ ಶಿವಪ್ಪ ಹನಮಪ್ಪ ಮುದಗಲ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. 26ಕೆಎಸಟಿ4ಎ: ಅಗ್ನಿವೀರ ಶಿವಪ್ಪ ಹನಮಪ್ಪ ಮುದಗಲ್ | Kannada Prabha

ಸಾರಾಂಶ

ತಾಯಿಯ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ತಿಳಿದು, ಐದು ದಿನಗಳ ರಜೆ ಪಡೆದು ನಾಸಿಕ್‌ನಿಂದ ಸ್ವಗ್ರಾಮ ಕುಷ್ಟಗಿ ತಾಲೂಕಿನ ತಾಲೂಕಿನ ಮಡಿಕೇರಿಯತ್ತ ಹೊರಟಿದ್ದ 24 ವರ್ಷದ ಅಗ್ನಿವೀರ ಶಿವಪ್ಪ ಹನುಮಪ್ಪ ಮುದಗಲ್ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ/ಏಕನಾಥ ಮೆದಿಕೇರಿ

ಕುಷ್ಟಗಿ/ಹನುಮಸಾಗರ: ತಾಯಿಯ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ತಿಳಿದು, ಐದು ದಿನಗಳ ರಜೆ ಪಡೆದು ನಾಸಿಕ್‌ನಿಂದ ಸ್ವಗ್ರಾಮ ತಾಲೂಕಿನ ಮಡಿಕೇರಿಯತ್ತ ಹೊರಟಿದ್ದ 24 ವರ್ಷದ ಅಗ್ನಿವೀರ ಶಿವಪ್ಪ ಹನುಮಪ್ಪ ಮುದಗಲ್, ಮನೆ ಸೇರುವ ಮುನ್ನವೇ ರೈಲು ಡಿಕ್ಕಿ ಹೊಡೆದು ಮೃತರಾಗಿದ್ದಾರೆ.

ಕಳೆದ ಮೂರು ತಿಂಗಳಿಂದ ನಾಸಿಕ್‌ನ ಆರ್ಮಿ ತರಬೇತಿ ಶಿಬಿರದಲ್ಲಿ ಅಗ್ನಿವೀರ ತರಬೇತಿ ಪಡೆಯುತ್ತಿದ್ದ ಶಿವಪ್ಪ, ರಜೆ ಪಡೆದು ರೈಲಿನಲ್ಲಿ ಸ್ವಗ್ರಾಮಕ್ಕೆ ಮರಳುತ್ತಿದ್ದರು. ಮಹಾರಾಷ್ಟ್ರದ ಕಲ್ಯಾಣ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದ ಬಳಿಕ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಿವಪ್ಪ ಅವರ ಬಳಿಯಿದ್ದ ಗುರುತಿನ ಚೀಟಿಯಿಂದ ಗುರುತು ಪತ್ತೆಯಾಯಿತು. ರೈಲ್ವೆ ಅಧಿಕಾರಿಗಳು ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಶನಿವಾರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು.

ಮಗನ ಆಗಮನಕ್ಕಾಗಿ ಕಾದಿದ್ದ ತಾಯಿಗೆ ಬಂದಿದ್ದು ಮಗನ ಪಾರ್ಥಿವ ಶರೀರ. ವಾಹನ ಗ್ರಾಮ ಪ್ರವೇಶಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮಸ್ಥರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮನೆಗಳ ಮುಂದೆ ನಿಂತಿದ್ದ ಗ್ರಾಮಸ್ಥರು ಪುಷ್ಪವೃಷ್ಟಿ ಮಾಡಿ ಅಂತಿಮ ವಿದಾಯ ಸಲ್ಲಿಸಿದರು.

ಸರ್ಕಾರಿ ಗೌರವದ ಅಂತ್ಯಕ್ರಿಯೆ: ಗ್ರಾಮದ ಜಮೀನಿನಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗ್ರೇಡ್–2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ, ದಿಶಾ ಸಮಿತಿ ಸದಸ್ಯ ದೊಡ್ಡ ಬಸವನಗೌಡ ಬಯ್ಯಾಪುರ, ಪ್ರಮುಖರಾದ ಬಸವರಾಜ ಹಳ್ಳೂರ, ಹನುಮಸಾಗರ ಪೊಲೀಸ್ ಠಾಣೆ ಸಿಬ್ಬಂದಿ, ಗ್ರಾಮದ ಮುಖಂಡರಾದ ಸಂಗನಗೌಡ, ಬರಮಗೌಡ, ಕುಷ್ಟಗಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಂಪನಗೌಡ ಬಳೂಟಗಿ, ಹನುಮಂತಪ್ಪ ಹಿರೇಮನಿ, ಶಂಕರಪ್ಪ ಕವಳಿಕಾಯಿ, ವಿಜಯ ಭೀಮಪ್ಪ ವಡ್ಡರ್, ಶಿವಾಜಿ ಹಡಪದ್, ಕಳಕಪ್ಪ ನಾಯಕವಾಡಿ, ಬಸಯ್ಯ ಹಿರೇಮಠ, ಶರಣಯ್ಯ ಹಿರೇಮಠ ಅಂತಿಮ ನಮನ ಸಲ್ಲಿಸಿದರು.

ತುಂಬಲಾರದ ನಷ್ಟ:‌ ದೇಶ ಕಾಯುವ ಸೈನಿಕನಾಗುವ ಹಾದಿಯಲ್ಲಿದ್ದ ಉದಯೋನ್ಮುಖ ತರುಣನನ್ನು ಕಳೆದುಕೊಂಡಿರುವುದು ಮಡಿಕೇರಿ ಗ್ರಾಮಸ್ಥರಿಗೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಸೈನಿಕ ಶಿವಾಜಿ ಹಡಪದ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!