ಪ್ರಹ್ಲಾದರೆಡ್ಡಿ ಮಾದಿನಾಳ
ವಡಕಿ ಗ್ರಾಮದ ಹಳೆಯ ಊರಿನ ಪ್ರದೇಶದಲ್ಲಿ ಪುರಾತನ ಕಾಲದ ಅವಶೇಷಗಳಿದ್ದು, ಆಯಾತಾಕಾರದ ಏಕ ಶಿಲಾ ವೀರಗಲ್ಲು ಗ್ರಾಮದ ಲಕ್ಷಪತಿ ಪಾಟೀಲ್ ಅವರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿದೆ. ಮುಳ್ಳುಗಿಡಗಳಲ್ಲಿ ಮುಚ್ಚಿ ಹೋಗಿದ್ದರಿಂದ ಈ ವೀರಗಲ್ಲನ್ನು ಯಾರೂ ಗುರುತಿಸಿರಲಿಲ್ಲ. ತೀವ್ರ ಬರಗಾಲ ಹಿನ್ನಲೆಯಲ್ಲಿ ಕುರಿಗಾಹಿಗಳು ಕುರಿಗಳೊಂದಿಗೆ ಈ ಮುಳ್ಳಿನ ಕಂಠಿಯಲ್ಲಿ ತಪ್ಪಲು ಕೊಯ್ಯುವಾಗ ವೀರಗಲ್ಲುನ್ನು ನೋಡಿದ್ದಾರೆ. ಮಾಹಿತಿ ತಿಳಿದ ಸಂಶೋಧಕ ಡಾ. ಯಮನೂರಪ್ಪ ನಾಯಕ ವಡಕಿ ಸ್ಥಳಕ್ಕೆ ಹೋಗಿದ್ದು, ವೀರಗಲ್ಲನ್ನು ಪತ್ತೆ ಹಚ್ಚಿದ್ದಾರೆ. ೬.೫ ಅಡಿ ಉದ್ದ ಹಾಗೂ ೨.೫ ಅಡಿ ಅಗಲ ವಿಸ್ತೀರ್ಣ ಹೊಂದಿದೆ. ಆಯತಾಕಾರದ ಏಕಶಿಲಾ ಪಟ್ಟಿಕೆ ೧೦ ಇಂಚು ಎತ್ತರ, ಮಧ್ಯದ ಪಟ್ಟಿಕೆ ೧೩ ಇಂಚು ಎತ್ತರ ಹಾಗೂ ಕೆಳ ಭಾಗದ ಪಟ್ಟಿಕೆ ೨೩ ಇಂಚು ಎತ್ತರವಾಗಿದೆ. ಬಲಭಾಗದ ಕೆಳಗೆ ಅಲ್ಪ ಪ್ರಮಾಣದಲ್ಲಿ ಭಿನ್ನವಾಗಿದೆ.
ಈ ವೀರಗಲ್ಲು ಗಮನಿಸಿದಾಗ ಕೆಳಗಿನ ಅಂಕಣದಲ್ಲಿ ವೀರನು ಹಾಗೂ ಇಬ್ಬರು ಶತ್ರುಗಳು ಕುದುರೆ ಸವಾರರೊಂದಿಗೆ ಬಿಲ್ಲು, ಬಾಣಗಳಿಂದ ಯುದ್ಧ ಮಾಡಿದ ಸನ್ನಿವೇಶ ಹಾಗೂ ವೀರನ ಹಿಂದೆ ಇಬ್ಬರು ಅಪ್ಸರೆಯರನ್ನು ಕೆತ್ತಲಾಗಿದೆ. ಮಧ್ಯ ಭಾಗದಲ್ಲಿ ವೀರನು ರಣರಂಗದಲ್ಲಿ ಯುದ್ಧ ಮಾಡಿ ವೀರ ಮರಣ ಅಪ್ಪಿದ ನಂತರ ಅಪ್ಸರೆಯರು ಆತನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯ ಕಾಣಬಹುದು.ಇನ್ನೂ ಮೇಲ್ಭಾಗದ ಸನ್ನಿವೇಶದಲ್ಲಿ ವೀರನು ತನ್ನ ಇಷ್ಟ ದೈವವಾದ ಶಿವಲಿಂಗ ಮುಂದೆ ಕೈ ಮುಗಿದು ಆರಾಧಿಸುತ್ತಿರುವುದು, ಶಿವನ ಕೈಯಲ್ಲಿ ಢಮರುಗದ ಚಿತ್ರಣವನ್ನು ಕೆತ್ತಲಾಗಿದೆ. ವೀರನ ಚಿತ್ರಣದಲ್ಲಿ ಆತನ ಸಾಹಸಕ್ಕೆ ತಕ್ಕಂತೆ ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೋರಳಲ್ಲಿ ಹಾರ, ಹಾಗೂ ಕಿವಿಯ ಓಲೆಗಳಂತಹ ಆಭರಣಗಳ ಜತೆಗೆ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ಇಲ್ಲಿ ಯಾವುದೇ ಪ್ರತ್ಯೇಕವಾಗಿ ಲಿಖಿತ ರೂಪದ ಶಾಸನ ದೊರೆತಿಲ್ಲ. ಆದರೆ ಇನ್ನೂ ಇದೇ ಕಾಲದ ವೀರಗಲ್ಲುಗಳು ದೊರೆಯುವ ಸಾಧ್ಯತೆ ಇದೆ.