ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡದಿರಿ

KannadaprabhaNewsNetwork |  
Published : Sep 27, 2026, 02:30 AM IST
ಕಂಪ್ಲಿ ತಾಲೂಕಿನ ನಂ.3 ಸಣಾಪುರ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನಕ್ಕೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು. | Kannada Prabha

ಸಾರಾಂಶ

ಆಂದೋಲನದಲ್ಲಿ ಗ್ರಾಮದ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಹಲವು ಅರ್ಜಿ ಸ್ವೀಕರಿಸಲಾಯಿತು.

ಕಂಪ್ಲಿ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ವಿಳಂಬ ಮಾಡದೆ ಸಕಾಲದಲ್ಲಿ ಕ್ರಮಕೈಗೊಂಡು ಅರ್ಜಿ ವಿಲೇವಾರಿ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಅರ್ಜಿ ಇತ್ಯರ್ಥಪಡಿಸಲು ಸಾಧ್ಯವಾಗದಿದ್ದಲ್ಲಿ ಕಾರಣವನ್ನು ಅರ್ಜಿದಾರರಿಗೆ ಕೂಡಲೇ ತಿಳಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುವಂತಿಲ್ಲ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಅಧಿಕಾರಿಗಳಿಗೆ ಸೂಚಿಸಿದರು.

ನಂ. 3 ಸಣಾಪುರ ಗ್ರಾಮದಲ್ಲಿ ತಾಲೂಕಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳ ಸೇವೆ ಹಾಗೂ ಯೋಜನೆ ಜನರ ಬಳಿಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳಿಗಾಗಿ ತಾಲೂಕು ಕೇಂದ್ರಕ್ಕೆ ಪದೇ ಪದೇ ಬರುವ ಅಗತ್ಯವಿಲ್ಲ. ಸ್ಥಳೀಯವಾಗಿಯೇ ಸಮಸ್ಯೆ ಆಲಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಸಾಧ್ಯವಾದಷ್ಟು ಶೀಘ್ರ ಪರಿಹಾರ ಕಲ್ಪಿಸಬೇಕು. ಅರ್ಜಿಗಳ ವಿಲೇವಾರಿಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ರಥ ಬೀದಿ ಅಗಲೀಕರಣ, ರಸ್ತೆ ಅಭಿವೃದ್ಧಿಗೆ ಮನವಿ

ಆಂದೋಲನದಲ್ಲಿ ಗ್ರಾಮದ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಹಲವು ಅರ್ಜಿ ಸ್ವೀಕರಿಸಲಾಯಿತು. ರಥ ಬೀದಿ ಅಗಲೀಕರಣ, ರಸ್ತೆ ಅಭಿವೃದ್ಧಿ, ಗ್ರಾಮ ಸ್ವಚ್ಛತೆ, ಮನೆ ಹಾಗೂ ನಿವೇಶನ ಒದಗಿಸುವುದು ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬೇಡಿಕೆ ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟರು.

ಗ್ರಾಮದ ಸಾರ್ವಜನಿಕರು ತಮ್ಮ ಸಮಸ್ಯೆ ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಅರ್ಜಿ ಸಲ್ಲಿಸಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅರ್ಜಿ ಸ್ವೀಕರಿಸಿ, ಸಮಸ್ಯೆಯ ಸ್ವರೂಪ ಹಾಗೂ ಪರಿಹಾರದ ಸಾಧ್ಯತೆಗಳ ಕುರಿತು ಅರ್ಜಿದಾರರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಸರ್ಕಾರದ ಜನಪರ ಯೋಜನೆಗಳು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಯೋಜನೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಗ್ರಾಮಸ್ಥರಿಗೆ ವಿವಿಧ ಯೋಜನೆಗಳ ಅರ್ಹತೆ, ಸೌಲಭ್ಯ ಪಡೆಯುವ ವಿಧಾನ ಹಾಗೂ ಇಲಾಖಾ ಸೇವೆಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್, ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ, ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ. ಅರುಣ್, ತೋಟಗಾರಿಕೆ ಸಹಾಯಕ ನಿರ್ದೇಶಕ ಜೆ. ಶಂಕರ್, ಉಪ ತಹಸೀಲ್ದಾರ್ ಎಸ್.ಡಿ. ರಮೇಶ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಬಿಇಒ ಟಿ.ಎಂ. ಸಿದ್ದಲಿಂಗಮೂರ್ತಿ, ಜೆಸ್ಕಾಂ ಎಇಇ ಕೆ.ಶ್ರೀನಿವಾಸಪ್ರಸಾದ್, ಎಒ ಟಿ.ಜ್ಯೋತಿ, ಎಸಿಡಿಪಿಒ ಮೋಹನ್ ಕಾಳಾಪುರ, ಪಶು ವೈದ್ಯಾಧಿಕಾರಿ ಡಾ. ಕೆ.ಯು.ಬಸವರಾಜ, ಪಿಡಿಒ ಯು. ಮಲ್ಲಿಕಾರ್ಜುನ, ವಿಎಒ ಮನೋಜ್ ಸೇರಿದಂತೆ ವಿವಿಧ ಗ್ರಾಪಂಗಳ ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!