ದೇಶ ಸೇವೆಗೆ ಅಗ್ನಿವೀರ ಯೋಜನೆ ಸುವರ್ಣಾಕಾಶ: ಡಿಸಿ ಅತುಲ್

KannadaprabhaNewsNetwork | Published : Aug 14, 2024 1:03 AM

ಸಾರಾಂಶ

ದೇಶ ಸೇವೆ ಮಾಡಬೇಕು ಎನ್ನುವ ಯುವಕರಿಗೆ ಅಗ್ನಿವೀರ ಯೋಜನೆ ಒಂದು ಸುವರ್ಣಾವಕಾಶವಾಗಿದೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ದೇಶ ಸೇವೆ ಮಾಡಬೇಕು ಎನ್ನುವ ಯುವಕರಿಗೆ ಅಗ್ನಿವೀರ ಯೋಜನೆ ಒಂದು ಸುವರ್ಣಾವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಸೇನಾ ನೇಮಕಾತಿ ಕೇಂದ್ರ ಬೆಳಗಾವಿ ಇವುಗಳ ಸಹಯೋಗದಲ್ಲಿ ಅಗ್ನಿವೀರ ಲಿಖಿತ ಪರೀಕ್ಷೆಗೆ ತೇರ್ಗಡೆ ಹೊಂದಿದ ಕೊಪ್ಪಳ ಜಿಲ್ಲಾ ಯುವಕರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷಾ ಮಾಹಿತಿಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ 406 ಅಭ್ಯರ್ಥಿಗಳು ಅಗ್ನಿವೀರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಅಭ್ಯರ್ಥಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ನಡೆಯಲಿದೆ. ಈ ಪರೀಕ್ಷೆಗಳನ್ನು ಜಿಲ್ಲೆಯಲ್ಲಿಯೇ ಹಮ್ಮಿಕೊಳ್ಳುವ ಜಿಲ್ಲಾಡಳಿತದ ಕೋರಿಕೆಗೆ ಬೆಳಗಾವಿಯ ಕರ್ನಲ್ ಒಪ್ಪಿಗೆ ನೀಡಿದ್ದಾರೆ. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುವುದು ಎಂದರು.

ಸಾಮಾನ್ಯವಾಗಿ ಮಾಹಿತಿಯ ಕೊರತೆಯಿಂದಾಗಿ ಕೆಲವು ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ವೇಳೆ ವಿಫಲವಾಗುತ್ತಾರೆ. ಈ ವಿಷಯವನ್ನು ಪರಿಗಣಿಸಿ, ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರಿಂದ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಗಾಗಿ ಇನ್ನೂ ಮೂರು ತಿಂಗಳು ಕಾಲಾವಕಾಶವಿದ್ದು, ದೇಹದಾರ್ಡ್ಯತೆ ಪರೀಕ್ಷೆಗಾಗಿ ಅಭ್ಯರ್ಥಿಗಳು ಕೈಗೊಳ್ಳಬೇಕಾದ ಸಿದ್ಧತೆಗಳು, ದಾಖಲೆಗಳ ಪರಿಶೀಲನೆಯ ಮಾಹಿತಿಯನ್ನು ಈ ತರಬೇತಿ ಕಾರ್ಯಾಗಾರದಲ್ಲಿ ನೀಡಲಾಗುತ್ತಿದೆ. ಇದೊಂದು ಒಳ್ಳೆಯ ಅವಕಾಶವಾಗಿದ್ದು, ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡು, ತರಬೇತಿಯಲ್ಲಿ ತಿಳಿಸುವ ಕ್ರಮಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿ ದೈಹಿಕ ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಳಗಾವಿಯ ಎ.ಆರ್.ಓ ಕರ್ನಲ್ ನಿಶಾಂತ ಶೆಟ್ಟಿ, ಆರ್ಮಿ ವೈದ್ಯರಾದ ಮೇಜರ್ ಎ. ವಿಶ್ವನಾಥ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ್ ಚಾಬಗೌಡರ್, ತಹಸೀಲ್ದಾರ ವಿಠಲ್ ಚೌಗಲಾ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಾರುತಿ ಗೊಂದಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಮಾಜಿ ಸೈನಿಕ ಪುಂಡಪ್ಪ ಅಡುವಳ್ಳಿ ಸೇರಿದಂತೆ ಇತರ ಅಧಿಕಾರಿಗಳು, ಮಾಜಿ ಸೈನಿಕರು ಉಪಸ್ಥಿತರಿದ್ದರು.

Share this article