ಆನೆ ದಾಳಿ ಪ್ರದೇಶಗಳಿಗೆ ಶಾಸಕ, ಅರಣ್ಯಾಧಿಕಾರಿ ಭೇಟಿ । ಶೆಟ್ಟಿಕೊಪ್ಪದಲ್ಲಿ ಜನ ಸಂಪರ್ಕ ಸಭೆ
ಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕ್ಯಾಡ್ ನಿರ್ಮಿಸಲು ₹60 ರಿಂದ 70 ಕೋಟಿ ಅಗತ್ಯವಿದ್ದು, ಸದ್ಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ₹20 ಕೋಟಿ ಅನುದಾನ ನೀಡಲು ಒಪ್ಪಿದ್ದಾರೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ತಾಲೂಕಿನ ಶೆಟ್ಟಿಕೊಪ್ಪದ ನವಗ್ರಾಮದ ಸಮುದಾಯ ಭವನದಲ್ಲಿ ಕಾಡಾನೆಗಳ ಹಾಳಿಯಿಂದ ಬೆಳೆ ಹಾನಿಯಾದ ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಪಂಗಳ ವಿವಿಧ ಗ್ರಾಮಗಳ ರೈತರೊಂದಿಗೆ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಹಾಗೂ ಇತರ ಪ್ರಾಣಿಗಳಿಂದ ₹60 ಲಕ್ಷ ಬೆಳೆ ಹಾನಿಯಾಗಿತ್ತು. ಈಗಾಗಲೇ ₹30 ಲಕ್ಷ ಪರಿಹಾರ ನೀಡಲಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾಡು ಪ್ರಾಣಿಗಳಿಂದ ಜೀವ ಹಾನಿ ಹಾಗೂ ಬೆಳೆ ಹಾನಿಗಳಿಗೆ ನೀಡುತ್ತಿದ್ದ ಪರಿಹಾರ ದುಪ್ಪಟ್ಟು ಮಾಡಲಾಗಿದೆ. ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಉಮೇಶ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಾಗ ₹15 ಲಕ್ಷ ಪರಿಹಾರ ನೀಡಿದ್ದೇವೆ. ಎಕ್ಕಡಬೈಲಿನ ರೈತ ಎಲಿಯಾಸ್ ಮೃತ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ್ದೇವೆ.
ಕೊಪ್ಪ ಡಿಎಫ್‌ಒ ನಂದೀಶ್ ಮಾತನಾಡಿ, ಕಳೆದ 4-5 ವರ್ಷದ ಹಿಂದೆ 38 ಕಾಡಾನೆಗಳು ಭದ್ರಾ ವೈಡ್ ಲೈಪ್ ನಿಂದ ಈ ಭಾಗಕ್ಕೆ ಬಂದಿದ್ದವು. ಈಗ ಈ ಸಂಖ್ಯೆ 50 ಕ್ಕೆ ಏರಿದೆ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಆನೆಗಳ ನಡವಳಿಕೆ, ಜೀವನ ಶೈಲಿ ಬಗ್ಗೆ 2 ದಿನಗಳ ಕಾರ್ಯಾಗಾರ ಮಾಡಲಾಗಿದ್ದು ನುರಿತ ಆನೆಗಳ ತಜ್ಞರನ್ನು ಕರೆಸ ಲಾಗಿತ್ತು.ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆನೆಗಳನ್ನು ಬೆದರಿಸಲು ಹೋಗದೆ ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಶೀರ್ಘ ಕಂಟ್ರೋಲ್ ರೂಂ ಆರಂಭಿಸಿ ಮಾಡಿ ದೂರವಾಣಿ ಸಂಖ್ಯೆ ನೀಡುತ್ತೇವೆ. ಅದಕ್ಕೆ ಸಾರ್ವಜನಿಕರು ದೂರು ನೀಡಬಹುದು ಎಂದರು.
ಸಭೆಗೂ ಮೊದಲು ಶಾಸಕ ಟಿ.ಡಿ.ರಾಜೇಗೌಡ, ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾಡಾನೆ ದಾಳಿಯಿಂದ ಬಾಳೆ ನಾಶವಾದ ಕಡಹಿನಬೈಲು ಗ್ರಾಮದ ಭದ್ರಾ ಕಾಲೋನಿ ಜೋಸೆಫ್ ಎಂಬುವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹೆಚ್ಚಾಗಿ ಕಾಡಾನೆಗಳು ಓಡಾಡುತ್ತಿರುವ ಸೂಸಲವಾನಿ ಗ್ರಾಮದ ಜೇನುಕಟ್ಟೆ ಸರ ಎಂಬ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿ ವಾಸ ಮಾಡುವ ಎರಡು ಕುಟುಂಬದವರಿಗೆ ಧೈರ್ಯ ತುಂಬಿದರು.
-- ಬಾಕ್ಸ್ ---
ಸೂಸಲವಾನಿ ಗ್ರಾಮದ ಜೇನುಕಟ್ಟೆ ಸರದ ರವಿ ಎಂಬ ರೈತ ಮಾತನಾಡಿ, ನನ್ನ ತೋಟಕ್ಕೆ ಆನೆಗಳು ನುಗ್ಗಿ ಹಾಳು ಮಾಡಿದೆ. ಜಮೀನಿನ ಪಕ್ಕಾ ಪೋಡು ಆಗಿಲ್ಲವೆಂಬ ಕಾರಣಕ್ಕೆ ಪರಿಹಾರ ನೀಡಿಲ್ಲ ಎಂದು ಅಲವತ್ತುಕೊಂಡರು. ಮಡಬೂರು ಗ್ರಾಮದ ಗುಡ್ಡೇಕೊಪ್ಪ ಶೋಭಾ ಸಹ ತಮ್ಮ 2 ಎಕರೆ ಅಡಕೆ ತೋಟ ಆನೆಯಿಂದ ಹಾಳಾಗಿದ್ದು ಪಕ್ಕಾ ಪೋಡು ಆಗಿಲ್ಲ ಎಂದು ತಮಗೂ ಪರಿಹಾರ ನೀಡಿಲ್ಲ ಎಂದು ದೂರಿದರು.
ಜೇನುಕಟ್ಟೆ ಸರದ ಸುಬ್ಬಣ್ಣ ಮಾತನಾಡಿ, ನನ್ನ ತೋಟದಲ್ಲಿ ಒಂದೇ ರಾತ್ರಿಯಲ್ಲಿ 30 ಅಡಕೆ ಮರಗಳನ್ನು ಆನೆಗಳು ಉರುಳಿಸಿವೆ. ಕಳೆದ 3 ವರ್ಷಗಳಲ್ಲಿ 150-200 ಅಡಕೆ ಮರಗಳು ನಾಶವಾಗಿವೆ ಕಷ್ಟತೋಡಿಕೊಂಡರು.