ಚನ್ನಪಟ್ಟಣ: ರಾಜ್ಯ ಸರ್ಕಾರ ಭೂದಾಖಲೆ ಹಾಗೂ ಇತರೆ ದಾಖಲೆಗಳ ಗಣಕೀಕೃತಗೊಳಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕಂದಾಯ ದಾಖಲೆಗಳನ್ನು ಕಳವು ಮಾಡುವ, ಮೂಲ ಸ್ವರೂಪ ಹಾಳು ಮಾಡುವ ದಾಖಲೆಗಳನ್ನು ತಿದ್ದುವ ಪ್ರಕರಣಗಳು ತಾಲೂಕು ಕಚೇರಿಗಳಲ್ಲಿ ಹೆಚ್ಚಾಗಿದೆ. ಬೆಂಗಳೂರು ಸುತ್ತಮುತ್ತ ಭೂಮಿ ಬೆಲೆ ಜಾಸ್ತಿಯಾದ ಮೇಲೆ ಈ ದಂಧೆ ಜಾಸ್ತಿಯಾಗಿದೆ. ಇದರಿಂದ ಪ್ರಾಮಾಣಿಕ ನಾಗರಿಕರಿಗೆ ಸಾಕಷ್ಟು ಅನನುಕೂಲವಾಗುತ್ತಿದೆ ಎಂದು ತಿಳಿಸಿದರು.
ಡಿಜಟಲೀಕರಣದಿಂದ ನೈಜ ಭೂದಾಖಲೆಗಳನ್ನು ತಿದ್ದುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮೂಲ ಸ್ವರೂಪ ಹೇಗಿದೆಯೋ ಅದನ್ನು ಹಾಗೆಯೇ ಉಳಿಸಿಕೊಂಡು ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಅವುಗಳನ್ನು ಗಣಕೀಕೃತಗೊಳಿಸಿ ಶೇಖರಿಸಲಾಗುತ್ತದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ಉಪ ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಶಿರಸ್ತೇದಾರರಾದ ಹರೀಶ್, ಸೋಮೇಶ್ ಇತರರಿದ್ದರು.
ಶಾಸಕರಿಂದ ನಗರ ಪ್ರದಕ್ಷಿಣೆ
ಶುಕ್ರವಾರ ಬೆಳಗ್ಗೆ ನಗರದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ ಸೇರಿದಂತೆ ೧೩ರಿಂದ ೧೬ನೇ ವಾರ್ಡ್‌ಗಳಲ್ಲಿ ಸಂಚರಿಸಿದ ಯೋಗೇಶ್ವರ್ ವಾರ್ಡ್ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಶೀಲಿಸಿದರು.
ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದು, ಕಸದ ಸಮಸ್ಯೆ ತೀವ್ರವಾಗಿದೆ. ತಾಜ್ಯ ವಿಲೇವಾರಿ ಸರಿಯಾಗಿ ಆಗದ ಪರಿಣಾಮ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಗೆ ಮುಕ್ತಿ ಕಲ್ಪಿಸುವ ನಿಟ್ಟಿನಲ್ಲಿ ವಂದಾರಗುಪ್ಪೆ ಬಳಿ ಗುರುತಿಸಿರುವ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಕೈಗೊಳ್ಳಬೇಕಿದೆ ಎಂದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ ನಗರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಶಾಸಕರು ಉಪಾಹಾರ ಸೇವಿಸುವ ಮೂಲಕ ಆಹಾರದ ಗುಣಮಟ್ಟ ಪರೀಕ್ಷಿಸಿದರು. ಈ ವೇಳೆ ಪೌರಾಯುಕ್ತ ಮಹೇಂದ್ರ, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ನಗರಸಭೆ ಸದಸ್ಯರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಇತರರಿದ್ದರು.
ಪೊಟೋ೧೦ಸಿಪಿಟಿ೨: