ಕನ್ನಡಪ್ರಭ ವಾರ್ತೆ ಕಲಬುರಗಿ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕ ವಲಯ ಮುಖ್ಯಸ್ಥ ನವನೀತ್ ಕುಮಾರ್ ಅವರು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಪತ್ರ ವಿನಿಮಯ ಮಾಡಿಕೊಂಡರು. ಈ ಮೂಲಕ ತನ್ನ ನೌಕರರಿಗೆ ಕಷ್ಟಕಾಲದಲ್ಲಿ ಕೈಹಿಡಿಯುವ ಕೆ.ಕೆ.ಆರ್.ಟಿ.ಸಿ ಕಾರ್ಯಕ್ಕೆ ಸಿಬ್ಬಂದಿ ಸಂತಸಗೊಂಡಿದ್ದಾರೆ.
ಕೆ.ಕೆ.ಆರ್.ಟಿ.ಸಿ. ಸಂಸ್ಥೆಯು ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಸಂಸ್ಥೆಗೆ ಹಗಲಿರಳು ಶ್ರಮಿಸುತ್ತಿರುವ ತನ್ನ ನಿಗಮದ ಸಿಬ್ಬಂದಿಗೆ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕೆ ದಾಖಲೆಯಾಗಿ ಇದೀಗ ₹1.20 ಕೋಟಿ ವಿಮೆ ಯೋಜನೆ ಸೇರಿದೆ.ಒಡಂಬಡಿಕೆ ಪತ್ರ ವಿನಿಮಯದ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಸಾರಿಗೆ ನಿಗಮದ ಸಿಬ್ಬಂದಿಗಳ ಸಾವು-ನೋವಿನ ಪ್ರಮಾಣ ಗಮನಿಸಿ ನಿಗಮವು ನೌಕರರಿಗೆ ವೈಯಕ್ತಿಕ / ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗ ನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗೆ ಗಣನೀಯ ಮೊತ್ತದಷ್ಟು ಹಣ ದೊರೆಯುವಂತೆ ಮಾಡುವ ಉದ್ದೇಶದಿಂದ ಇಂದಿಲ್ಲಿ ಯೂನಿಯನ್ ಬ್ಯಾಕ್ ಆಫ್ ಇಂಡಿಯಾ ಅವರೊಂದಿಗೆ ಯೋಜನೆಯ ಸೌಲಭ್ಯಕ್ಕೆ ಒಪ್ಪಂದ ಮಾಡಿಕೊಂಡಿದೆ. ಪ್ರೀಮಿಯಂ ರಹಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಹಕರಿಸಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅವರಿಗೆ ಧನ್ಯವಾದ ತಿಳಿಸುವೆ ಎಂದರು.
ಒಡಂಬಡಿಕೆ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್, ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿರ್ದೇಶಕಿ (ಸಿ&ಜಾ) ಡಾ. ಕೆ .ನಂದಿನಿ ದೇವಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿನಿಧಿಯಾಗಿ ಕಲಬುರಗಿ ವಲಯದ ಪ್ರಾದೇಶಿಕ ಮುಖ್ಯಸ್ಥ ವೆಂಕಟ್ ಸುಧೀರ ಚೀದೆಲ್ಲ, ಸಹಾಯಕ ಪ್ರಧಾನ ವ್ಯವಸ್ಥಾಪಕ (ಸಿ.ಆರ್.ಸಿ.) ನಾಗಭೂಷಣ. ಜಿ.ಆರ್., ಮುಖ್ಯ ವ್ಯವಸ್ಥಾಪಕ (ಸಿ.ಆರ್.ಸಿ.) ನಾಗರಾಜ್ ದೇಶನೂರು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.