ದಲಿತ ನಾಯಕ ಖರ್ಗೆ ಪ್ರಧಾನಿ ಅಭ್ಯರ್ಥಿ ಸ್ವಾಗತಾರ್ಹ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ಅಸ್ಪೃಶ್ಯರ ಬಾಳಿಗೆ ಬೆಳಕಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಐ.ಎನ್. ಡಿ. ಐ.ಎ. ಒಕ್ಕೂಟ ಒಮ್ಮತದೊಂದಿಗೆ ಪ್ರಧಾನಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಿ ದಲಿತರ ಪ್ರಧಾನಿ ಆಶಯಕ್ಕೆ ಶ್ರೀಕಾರ ಹಾಕಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಕಲಾವಿದ ಎಲ್ಲಪ್ಪ ಹರ್ಷ ವ್ಯಕ್ತಪಡಿಸಿದರು.

ಐಎನ್‌ಡಿಐಎ ಒಕ್ಕೂಟದಿಂದ ಮಲ್ಲಿಕಾರ್ಜುನ್ ಖರ್ಗೆ ಒಮ್ಮತದ ಆಯ್ಕೆ । ದಲಿತ ಸಂಘರ್ಷ ಸಮಿತಿಯಿಂದ ಸ್ವಾಗತ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬುದ್ಧ, ಬಸವ, ಅಂಬೇಡ್ಕರ್ ಆಶಯಗಳಿಗೆ ಬದ್ಧರಾಗಿ ನಿರಂತರ ಸಾರ್ವಜನಿಕ ಸೇವೆ ಮಾಡುವುದರ ಮೂಲಕ ಕೇಂದ್ರ, ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿ ಅಸ್ಪೃಶ್ಯರ ಬಾಳಿಗೆ ಬೆಳಕಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಐ.ಎನ್. ಡಿ. ಐ.ಎ. ಒಕ್ಕೂಟ ಒಮ್ಮತದೊಂದಿಗೆ ಪ್ರಧಾನಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಿ ದಲಿತರ ಪ್ರಧಾನಿ ಆಶಯಕ್ಕೆ ಶ್ರೀಕಾರ ಹಾಕಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಕಲಾವಿದ ಎಲ್ಲಪ್ಪ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಅನೇಕ ರಾಜಕೀಯ ಪಕ್ಷಗಳು ದಲಿತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡು ರಾಜಕೀಯವಾಗಿ ಉನ್ನತ ಸ್ಥಾನಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದರು, ಆದರೆ ಇಂದು ಐ.ಎನ್.ಡಿ.ಐ.ಎ ಒಕ್ಕೂಟ ದಲಿತ ನಾಯಕನನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರುವುದರಿಂದ ದಶಕಗಳ ಕಾಲದ ದಲಿತರ ಭಾವನೆಗೆ ಮನ್ನಣೆ ಸಿಕ್ಕಂತಾಗಿದೆ.

ಮಲ್ಲಿಕಾರ್ಜುನ ಖರ್ಗೆ ಒಬ್ಬ ವ್ಯಕ್ತಿಯಲ್ಲ, ಅವರು ನೊಂದವರ ಪಾಲಿನ ಶಕ್ತಿ. ದೀನ, ದಲಿತ, ಬಡವ, ಅಲ್ಪಸಂಖ್ಯಾತರ ಹಿತಕಾಯುವ ಕಾಯಕಯೋಗಿಯಂತೆ ಪ್ರಾಮಾಣಿಕತೆಯಿಂದ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಪ್ರಶ್ನಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷರಾಗಿ ಗದ್ದುಗೆ ಹಿಡಿದ ಮಲ್ಲಿಕಾರ್ಜುನ ಖರ್ಗೆಯವರು, ನಿರಂತರಪಕ್ಷ ಸಂಘಟನೆಯ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಪುನಶ್ಚೇತನಗೊಂಡಿತು ಎಂದರು.

9 ಬಾರಿ ವಿಧಾನಸಭೆಯ ಸದಸ್ಯರಾಗಿ ಸೋಲಿಲ್ಲದ ಸರದಾರರಂತೆ ಖರ್ಗೆಯವರು ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದರು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಆಡಳಿತ ಪಕ್ಷದ ಧೋರಣೆಗಳ ವಿರುದ್ಧ ಕಟುವಾಗಿ ಟೀಕಿಸುವುದರೊಂದಿಗೆ ಸಾಮಾಜಿಕ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು, ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿ ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅಪಾರ ಅನುಭವಿಯಾಗಿದ್ದಾರೆ. ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರ ಪಕ್ಷ ನಿಷ್ಠೆ, ಪ್ರಾಮಾಣಿಕ ವ್ಯಕ್ತಿತ್ವ, ಸಾಮಾಜಿಕ ಕಳಕಳಿಗೆ ಇಂದು ಪ್ರಧಾನಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಿರುವುದು ಸ್ವಾಗತರ್ಹ. ಈ ಹಿನ್ನೆಲೆಯಲ್ಲಿ ಎಲ್ಲಾ ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಆ ಮೂಲಕ ಮೊಟ್ಟಮೊದಲ ದಲಿತ ಪ್ರಧಾನಿ ಆಯ್ಕೆಗೆ ಸಹಕರಿಸಬೇಕು ಎಂದು ಗೋಷ್ಠಿಯಲ್ಲಿ ತಿಳಿಸಿದರು.

---

ಬಂಗಾರಪೇಟೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ದಲಿತ ಸಂಘರ್ಷ ಸಮಿತಿಯ ಕಲಾವಿದ ಯಲ್ಲಪ್ಪ.

Share this article