ಕನ್ನಡಪ್ರಭ ವಾರ್ತೆ ಕಾರ್ಕಳ
ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೊನಲು ಬೆಳಕಿನ ಸಾಂಸ್ಕೃತಿಕ ಉತ್ಸವ - ಅಮೃತ ವೈಭವ ಡಿ.೨೪ರಂದು ಸಂಜೆ ನಡೆಯಲಿದೆ. ಹೆಬ್ರಿಯ ಉತ್ಸವವಾಗಿ ಅಮೃತ ವೈಭವ ಮೂಡಿಬರಲಿದೆ ಎಂದು ಅಮೃತಭಾರತಿ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಎಚ್. ಗುರುದಾಸ ಶೆಣೈ ತಿಳಿಸಿದರು.ಅವರು ಶುಕ್ರವಾರ ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
೨೦೪೭ ವಿದ್ಯಾರ್ಥಿಗಳು ಕಲಿಯುತ್ತಿರುವ ಸಂಸ್ಥೆಯಲ್ಲಿ ಹೊಸ ಪರಿಕಲ್ಪನೆಯಲ್ಲಿ ಅಮೃತ ವೈಭವವನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪೋಷಕರು ಸೇರಿ ೧೦ ಸಾವಿರ ಮಂದಿ ಅಮೃತ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ. ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ದೇಶಿಯ ಸಂಸ್ಕೃತಿಯನ್ನು ಸಾರುವ ಸಂಚಲನ, ಘೋಷ್, ಶಿಶು ನೃತ್ಯ, ಸಾಮೂಹಿಕ ವ್ಯಾಯಾಮ, ಏಕಚಕ್ರ, ದ್ವಿಚಕ್ರ ಸಮತೋಲನ, ಪಿರಮಿಡ್, ಕುಣಿತ ಭಜನೆ, ಮಲ್ಲಕಂಬ, ರಚನೆ, ಜಡೆ ಕೋಲಾಟ, ಬೆಂಕಿ ಸಾಹಸ, ಜನಪದ ನೃತ್ಯ ವೈವಿಧ್ಯ, ಯೋಗಾಸನ, ನೃತ್ಯ ರೂಪಕ ಸಹಿತ ಹಲವು ಕಾರ್ಯಕ್ರಮಗಳು ಅಮೃತ ವೈಭವದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.ಕನ್ನಡ ಮಾಧ್ಯಮ ಶಾಲೆ, ಹಾಸ್ಟೆಲ್ ಸಹಿತ ೨೦ ಕೋಟಿ ರು. ವೆಚ್ಚದಲ್ಲಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ. ವಾರ್ಷಿಕ ೫೦ ಲಕ್ಷ ರು. ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಾರ್ಷಿಕೋತ್ಸವ ಹೊಸ ಆಯಾಮ ನೀಡುವ ಉದ್ದೇಶದಿಂದ ಹೊಸ ಯೋಚನೆ, ಯೋಜನೆಯಿಂದ ಅಮೃತ ವೈಭವ ಕಾರ್ಯಕ್ರಮ ನಡೆಯುತ್ತಿದೆ ಎಂದು ಅಮೃತಭಾರತಿ ವಿಶ್ವಸ್ಥ ಮಂಡಳಿಯ ಸದಸ್ಯ ಯೋಗೀಶ್ ಭಟ್ ತಿಳಿಸಿದರು.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರು, ಶಾಸಕರು, ವಿವಿಧ ಗಣ್ಯರು ಅಮೃತ ವೈಭವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.