ಹಾನಗಲ್ಲದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ, ರೈತನ ಮೊಗದಲ್ಲಿ ಮಂದಹಾಸ

KannadaprabhaNewsNetwork | Published : May 23, 2024 1:05 AM
Follow Us

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ವಾಡಿಕೆಯಿಂತ ಹೆಚ್ಚಿನ ಮುಂಗಾರು ಪೂರ್ವ ಮಳೆಯಾಗಿದ್ದು, ರೈತರಿಗೆ ಸಂತಸವಾಗಿದೆ. ಕೃಷಿ ಚಟುವಟಿಕೆ ಚುರುಕಾಗಿದ್ದು, ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಮುಂಗಾರು ವಾಡಿಕೆಯಂತೆ ಮಳೆ ಬಂದು ಕೃಷಿ ಚಟುವಟಿಕೆ ಗರಿಗೆದರಿದೆ. ಕೃಷಿ ಇಲಾಖೆ ತಕ್ಷಣದಿಂದಲೇ ಬಿತ್ತನೆ ಬೀಜ ವಿತರಣೆಗೆ ಸಜ್ಜಾಗಿದೆ. ಕೆರೆ, ಹಳ್ಳ, ಹೊಳೆಗಳು ಹಾನಗಲ್ಲ ತಾಲೂಕಿನಲ್ಲಿ ಸಾಕಷ್ಟಿದ್ದರೂ, ಹಲವು ದಶಕಗಳಿಂದ ಧರ್ಮಾ ಜಲಾಶಯ ಇಲ್ಲಿಯ ಕೃಷಿಭೂಮಿಗೆ ಜಲಮೂಲವಾಗಿದೆ. ಈಗ ರೈತರಿಗೆ ನೀರು ಒದಗಿಸಲು ಬಾಳಂಬೀಡ ಹಾಗೂ ಹಿರೆಕಾಂಶಿ ನೀರಾವರಿ ಯೋಜನೆಗಳು ಸಜ್ಜಾಗಿವೆ.

ಪ್ರಸ್ತುತ ಕೃಷಿ ವರ್ಷಕ್ಕೆ ಮಳೆಗಾಗಿ ಕಾಯುತ್ತಿದ್ದ ರೈತನಿಗೆ ಸಮಾಧಾನ ಉಂಟಾಗಿದೆ. ಮೇ ತಿಂಗಳಿನಲ್ಲಿ ವಾಡಿಕೆ ಮಳೆ ೭೪ ಮಿಮೀ ಇದ್ದರೆ ೧೦೨ ಮಿಮೀ ಮಳೆ ಬಿದ್ದಿದೆ. ಹೀಗಾಗಿ ಕೃಷಿ ಚಟುವಟಿಕೆ ಆರಂಭವಾಗಿದೆ. ತಾಲೂಕಿನಲ್ಲಿ ೫೨ ಸಾವಿರ ಹೆಕ್ಟೇರ ಕೃಷಿ ಭೂಮಿ ಇದೆ. ಮುಂಜಾಗ್ರತಾ ಕ್ರಮವಾಗಿ ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಹಾನಗಲ್ಲ ತಾಲೂಕಿನ ಹಾನಗಲ್ಲ, ಚಿಕ್ಕಾಂಸಿ ಹೊಸೂರು, ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಹಾಗೂ ವರ್ದಿ ಸೇರಿದಂತೆ ೯ ಬೀಜ ವಿತರಣಾ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸಜ್ಜಾಗಿದೆ.

೧೪,೩೫೦ ಹೆಕ್ಟೇರ್ ಬತ್ತ, ೨೪,೧೦೩ ಹೆಕ್ಟೇರ್ ಗೋವಿನ ಜೋಳ, ೫೮೮ ಹೆಕ್ಟೇರ್ ಶೇಂಗಾ, ೨೪೦೩ ಹೆಕ್ಟೇರ್ ಸೋಯಾ ಅವರೆ, ೩೧೦೦ ಹೆಕ್ಟೇರ್ ಹತ್ತಿ ಬಿತ್ತನೆಯಾಗುವ ಅಂದಾಜಿದೆ. ಇದಕ್ಕಾಗಿ ೧,೮೦೦ ಕ್ವಿಂಟಲ್ ಸೋಯಾ ಅವರೆ, ೩,೭೦೦ ಕ್ವಿಂಟಲ್ ಬತ್ತ, ೧,೮೫೦ ಕ್ವಿಂಟಲ್ ಗೋವಿನ ಜೋಳ, ೩೧೦ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜಗಳನ್ನು ಇಲಾಖೆ ದಾಸ್ತಾನು ಮಾಡಿದೆ. ತಾಲೂಕಿನ ೩೮ ಸಾವಿರ ರೈತರಿಗೆ ಗರಿಷ್ಠ ೫ ಎಕರೆ ವರೆಗೆ ಅಗತ್ಯದ ಬಿತ್ತನೆ ಬೀಜ ವಿತರಿಸಲಾಗುತ್ತದೆ.

ರಸಗೊಬ್ಬರದ ಕೊರತೆಯಾಗದಂತೆ ಕಟ್ಟುನಿಟ್ಟಿನ ನಿಯಮಗಳ ಅಡಿ ಹಾನಗಲ್ಲ ತಾಲೂಕಿನ ೭೮ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಮಾರಾಟಕ್ಕೆ ಕೃಷಿ ಇಲಾಖೆ ಸೂಚಿಸಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇಂದಿನಿಂದಲೇ ಬಿತ್ತನೆ ಬೀಜ ವಿತರಣೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಬಿತ್ತನೆ ಬೀಜಕ್ಕೆ ಯಾವುದೇ ತೆರನಾಗಿ ಕೊರತೆ ಆಗದು. ರಸಗೊಬ್ಬರಕ್ಕೂ ಕೊರತೆಯಾಗದು ಎಂದು ಕೃಷಿ ಇಲಾಖೆ ರೈತರಿಗೆ ಭರವಸೆ ನೀಡಿದೆ.

ಕಳಪೆ ಬಿತ್ತನೆ ಬೀಜದ ಹಾವಳಿ ತಪ್ಪಿಸಲು ಪ್ರಮಾಣಿತ ಬಿತ್ತನೆ ಬೀಜಗಳನ್ನೇ ಖರೀದಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ ಕೃಷಿ ಇಲಾಖೆಯಿಂದ ವಿತರಣೆಯಾಗುವ ಬಿತ್ತನೆ ಬೀಜಗಳನ್ನು ಕ್ಯೂಆರ್ ಕೋಡ್ ಅನುಸರಿಸಿದ ಪರೀಕ್ಷಿಸಿ ಪ್ರಮಾಣಿತ ಬಿತ್ತನೆ ಬೀಜಗಳನ್ನೆ ವಿತರಿಸಲಾಗುವುದು. ಇದರಿಂದ ಕಳಪೆ ಬೀಜ ವಿತರಣೆಯನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದ್ದಾರೆ.

ಹಾನಗಲ್ಲ ತಾಲೂಕಿನಲ್ಲಿ ಧರ್ಮಾ, ವರದಾ ನದಿ, 700ರಷ್ಟಿರುವ ಕೆರೆಗಳು, ಧರ್ಮಾ ಜಲಾಶಯ, ಕೊಳವೆ ಬಾವಿಗಳನ್ನು ಅವಲಂಬಿಸಿ ೭೦೦೦ ರೈತರು ೧೦ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬತ್ತದ ನಾಟಿ ಮಾಡುವ ನಿರೀಕ್ಷೆಯೂ ಇದೆ.

ಮುಂಗಾರಿಗಾಗಿ ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ. ಭೂಮಿ ಹದಗೊಳಿಸುವಲ್ಲಿ ರೈತರು ಮುಂದಾಗಿದ್ದಾರೆ. ಆದರೆ ಕಳಪೆ ಬೀಜಗಳ ಬಗ್ಗೆ ಎಚ್ಚರಿಕೆ ಇರಲಿ. ಸಾವಯವ ಮತ್ತು ಜೈವಿಕ ಗೊಬ್ಬರ ಬಳಸಿ. ನ್ಯಾನೋ ಯೂರಿಯಾ ಹಾಗೂ ಡಿಎಪಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಯೂರಿಯಾ ಡಿಎಪಿ ಬದಲಾಗಿ ಕಾಂಪ್ಲೆಕ್ಸ್‌ ಗೊಬ್ಬರ ಬಳಕೆ ಒಳ್ಳೆಯದು. ಬಿತ್ತನೆ ಬೀಜ ವಿತರಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನ್‌ಕುಮಾರ ಹೇಳಿದರು.