ಯಲ್ಲಾಪುರ: ಕಳೆದ ಸಾಲಿನಲ್ಲಿ ₹೪೭.೨೫ ಲಕ್ಷ ಲಾಭ ಗಳಿಸಿ, ಜಿಲ್ಲೆಯಲ್ಲೇ ಕೃಷಿಗೆ ಉತ್ತೇಜನ ನೀಡುತ್ತಿರುವ ಉತ್ತಮ ಸಹಕಾರಿ ಸಂಸ್ಥೆ ಎಂಬುದು ಕೂಡ ನಮಗೆ ಹೆಮ್ಮೆಯಾಗುತ್ತಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಇಂದು ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯಿಂದ ಉತ್ತಮ ಸಂಪಾದನೆ, ನೆಮ್ಮದಿ ಮತ್ತು ಪರಂಪರೆಯ ಚಿಂತನೆ ಉಳಿಸಿಕೊಂಡಂತೆ ಆಗುತ್ತದೆ ಎಂಬ ದೃಷ್ಟಿಯಿಂದ ಯುವಕರಿಗೆ ಕೃಷಿಗೆ ಒತ್ತು ನೀಡುತ್ತಿದ್ದ ಉತ್ತಮ ಯುವ ಕೃಷಿಕರನ್ನು ಗುರುತಿಸಿ, ಗೌರವಿಸುತ್ತಿದ್ದೇವೆ. ರೈತರಿಗೆ ಕಡಿಮೆ ದರದಲ್ಲಿ ಕೃಷಿ ಉಪಕರಣ ನೀಡುತ್ತಿರುವ ನಮ್ಮ ಸಂಸ್ಥೆಯಲ್ಲಿಯೇ ವ್ಯವಹರಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದರು.
ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮಾತನಾಡಿ, ಯುವಜನಾಂಗ ಕೃಷಿಯಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಆಧುನಿಕ ಕೃಷಿಗೆ ಶಕ್ತಿನೀಡಿ, ಯುವಕರನ್ನು ಪ್ರೇರೇಪಿಸುವ ಕಾರ್ಯವನ್ನು ಮಲೆನಾಡು ಸಹಕಾರಿ ಸಂಘ ಮಾಡುತ್ತಿದೆ. ಇದು ಸಮಾಜಕ್ಕೆ ಆದರ್ಶವಾದುದು ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜಿಲ್ಲೆಯಲ್ಲೇ ಮಲೆನಾಡು ಕೃಷಿ ಸಹಕಾರಿ ಸಂಘ ಆಧುನಿಕ ಕೃಷಿ ಪದ್ಧತಿಗೆ ಒತ್ತು ನೀಡುತ್ತಿರುವುದನ್ನು ಗಮನಿಸಿದ್ದೇನೆ. ಇದು ಇನ್ನು ಹೆಚ್ಚು ವಿಸ್ತಾರಗೊಳ್ಳುವಂತಾಗಬೇಕು ಎಂದರು.
ಶಿರಸಿಯ ಲೆಕ್ಕಪರಿಶೋಧಕ ಎಸ್.ಜಿ.ಹೆಗಡೆ ಬೆದೆಹಕ್ಲ ಸಾಂದರ್ಭಿಕವಾಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಆದಿತ್ಯ ಹೆಗಡೆ ಹಿರೆಸರ ಮಾತನಾಡಿದರು.