ರಾಣಿಬೆನ್ನೂರು: ತೊಗರಿ ಮತ್ತು ಹತ್ತಿ ಬೆಳೆಯ ಇಳುವರಿ ಹೆಚ್ಚಿಸಲು ಕೃಷಿ ವಿಜ್ಞಾನಿಗಳ ಸಲಹೆಗಳನ್ನು ಪಾಲಿಸಬೇಕು ಎಂದು ಬೇಸಾಯ ಶಾಸ್ತ್ರದ ವಿಷಯತಜ್ಞೆ ಡಾ. ಸಿದ್ದಗಂಗಮ್ಮ ಕೆ.ಆರ್. ತಿಳಿಸಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗಾಗಿ ತೊಗರಿ ಮತ್ತು ಹತ್ತಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ತೊಗರಿಯಲ್ಲಿ ಇಳುವರಿಯನ್ನು ಹೆಚ್ಚಿಸಲು ಬಿತ್ತನೆ ಮಾಡಿದ 50 ದಿನಗಳಲ್ಲಿ ಬೆಳೆ ಮೇಲ್ಭಾಗದ ಕುಡಿಯನ್ನು 5-6 ಸೆಂಮೀ ಚಿವುಟಬೇಕು. ಇದರಿಂದ ಅತಿ ಎತ್ತರ ಬೆಳೆಯುವುದನ್ನು ತಡೆದು ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆದು ಕಾಯಿಗಳ ಸಂಖ್ಯೆ ಹೆಚ್ಚಾಗಿ ಇಳುವರಿ ಹೆಚ್ಚುತ್ತದೆ ಎಂದರು.ಪ್ರಸ್ತುತ ಕೃಷಿ ಮಹಿಳೆಯರು ಈ ಚಟುವಟಿಕೆಯನ್ನು ಕೈಯಿಂದ ಮಾಡುವುದರಿಂದ ಹೆಚ್ಚಿನ ಸಮಯ ಮತ್ತು ಪರಿಶ್ರಮ ಬೇಕಾಗುತ್ತದೆ. ಇದರ ಪರ್ಯಾಯವಾಗಿ ಸೌರ ಶಕ್ತಿಚಾಲಿತ/ಬ್ಯಾಟರಿ ಚಾಲಿತ ಉಪಕರಣವನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಇದರಿಂದ ಗಂಟೆಯೊಳಗೆ ಒಂದು ಎಕರೆ ತೊಗರಿ ಬೆಳೆಯ ಕುಡಿ ಚಿವುಟಬಹುದು. ಸಾಮಾನ್ಯವಾಗಿ ಕಾಯಿಕೊರಕ ಕೀಟಗಳು ಸಸಿಗಳ ಮೇಲ್ಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಕುಡಿ ಚಿವುಟುವುದರಿಂದ ಕೀಟಗಳ ಸಂಖ್ಯೆಗಳನ್ನು ಗಣನೀಯವಾಗಿ ನಿವಾರಣೆ ಮಾಡಬಹುದು ಎಂದರು.
ತೊಗರಿಯಲ್ಲಿ ಪಲ್ಸ್ ಬೂಸ್ಟರ್ ಬಳಸಿ ಇಳುವರಿ ಹೆಚ್ಚಿಸಬಹುದು. ಪಲ್ಸ ಬೂಸ್ಟರ್ ಪೋಷಕಾಂಶಗಳ ಮಿಶ್ರಣವಾಗಿದ್ದು, ಪ್ರಾಥಮಿಕ ಪೋಷಕಾಂಶಗಳು(ಸಾರಜನಕ ಶೇ. 13, ರಂಜಕ ಶೇ. 33), ಲಘು ಪೋಷಕಾಂಶಗಳು(ಶೇ. 5) ಮತ್ತು ಸಸ್ಯ ಬೆಳವಣಿಗೆ ಪ್ರಚೋದಕಗಳನ್ನು(35 ಪಿಪಿಎಂ) ಒಳಗೊಂಡಿದೆ. ಪಲ್ಸ ಬೂಸ್ಟರ್ ಬಳಸುವುದರಿಂದ ಕೇವಲ ಹೂವು ಉದುರುವುದನ್ನು ತಡೆಗಟ್ಟುವುದಲ್ಲದೇ ಕಾಳುಗಳ ಗಾತ್ರ ಮತ್ತು ಗುಣಮಟ್ಟ ವೃದ್ಧಿಯಾಗುವುದರ ಜತೆಗೆ ಕಾಯಿಗಳ ಸಂಖ್ಯೆ ಹೆಚ್ಚಾಗುವುದು ಹಾಗೂ ಟೊಂಗೆಗಳಲ್ಲಿ ಕೊನೆಯವರೆಗೂ ಕಾಯಿ ಕಟ್ಟುತ್ತವೆ ಎಂದರು. ಹತ್ತಿ ಬೆಳೆಯ ಸಸ್ಯಗಳಲ್ಲಿ ಪ್ರಚೋದಕ ಹಾಗೂ ನಿರೋಧಕಗಳು ಮತ್ತು ಪೋಷಕಾಂಶಗಳ ಪ್ರಮಾಣದಲ್ಲಿ ಏರುಪೇರಾಗುತ್ತವೆ. ಈ ವ್ಯತ್ಯಾಸದಿಂದ ಒಟ್ಟು ಶರ್ಕರ ಪಿಷ್ಟ ಹೆಚ್ಚಾಗುವುದಲ್ಲದೆ ಟ್ಯಾನಿನ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಎಲೆಯಲ್ಲಿನ ರಸಸಾರ ಕಡಿಮೆಯಾಗಿ ಎಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರ ನಿರ್ವಹಣೆಗೆ ಸಾಕಷ್ಟು ಪ್ರಮಾಣದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಒದಗಿಸಬೇಕು.ಸಾರಜನಕ, ರಂಜಕ ಮತ್ತು ಪೋಟ್ಯಾಷ್ ಈ ಮೂರು ಪೋಷಕಾಂಶಗಳ ಸಮತೋಲನ ಗೊಬ್ಬರ ಒದಗಿಸುವುದು. ಎಲೆಕೆಂಪು ಬಾಧೆಯ ಲಕ್ಷಣ ಕಂಡ ಕೂಡಲೆ ನೀರಿನಲ್ಲಿ ಕರಗುವಂತಹ ಶೇ. 1ರಷ್ಟು ಮೆಗ್ನೆಶಿಯಂ ಸಲ್ಫೆಟ್ ದ್ರಾವಣವನ್ನು ಸಿಂಪಡಿಸಬೇಕು. ಮುಂಜಾಗ್ರತಾ ಕ್ರಮವಾಗಿ ಚಳಿಗಾಲ ಪ್ರಾರಂಭವಾಗುವುದಕ್ಕಿಂತ ಮೊದಲು ಶೇ. 2ರಷ್ಟು ಡಿಎಪಿ ಅಥವಾ ಯುರಿಯಾ ರಸಗೊಬ್ಬರ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದರು.ಸಸ್ಯರೋಗ ತಜ್ಞೆ ಡಾ. ಬಸಮ್ಮ ಹಾದಿಮನಿ ಮಾತನಾಡಿ, ತೊಗರಿ ಬೆಳೆಯಲ್ಲಿ ಕಂಡುಬರುವ ಕಾಯಿಕೊರಕ ಮತ್ತು ಎಲೆ ಮಡಚುವ ಕೀಟಗಳ ನಿರ್ವಹಣೆಗೆ ಪ್ರತಿಯೊಬ್ಬ ರೈತರು ಆರಂಭಿಕವಾಗಿ ಪ್ರತಿ ಲೀಟರ್ ನೀರಿಗೆ 2 ಮಿಲೀ ಪ್ರೊಫೆನೊಫಾಸ್ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಎರಡನೇ ಸಿಂಪರಣೆಯಾಗಿ ಬೇವಿನ ಎಣ್ಣೆ 5 ಮಿಲೀ ಪ್ರತಿ ಲೀಟರ್ ನೀರಿಗೆ ಅಥವಾ ಬೇವುಜನ್ಯ ಕೀಟನಾಶಕ ಬೆರೆಸಿ ಸಿಂಪರಣೆ ಮಾಡಬೇಕು. ಮೂರು ಹಾಗೂ ನಾಲ್ಕನೇ ಹಂತದ ಕೀಡೆ ಕಂಡುಬಂದರೆ ಕ್ಲೋರಾಂಟ್ರೀನಿಲಿಪ್ರೋಲ್ ಅಥವಾ ಪ್ಲೊಬೆಂಡಿಯಾಮೈಡ್ ಸಿಂಪರಣೆ ಮಾಡಬೇಕು. ಕಾಯಿ ನೊಣದ ಬಾಧೆಗಾಗಿ ಕಾಯಿಗಳು ಎಳೆಕಾಯಿಗಳಿದ್ದಾಗ ಕ್ಲೋರಾಂಟ್ರೀನಿಲಿಪ್ರೋಲ್ ಜತೆಗೆ ಲ್ಯಾಂಬ್ಡಾಸೈಲೋಥ್ರೀನ್ ಸಂಯುಕ್ತ ಕೀಟನಾಶಕವನ್ನು ಸಿಂಪರಣೆ ಮಾಡಬೇಕು ಎಂದರು. ಕೇಂದ್ರದ ಗೃಹ ವಿಜ್ಞಾನದ ವಿಷಯತಜ್ಞೆ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿದರು. ತರಬೇತಿಯಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.