ನ.13ರಿಂದ ಬೆಂಗಳೂರು ಕೃಷಿ ವಿವಿಯಿಂದ ಕೃಷಿ ಮೇಳ: ಗಮನ ಸೆಳೆಯಲಿದೆ ಕರಬೂಜ ತಳಿ

KannadaprabhaNewsNetwork |  
Published : Nov 09, 2025, 02:30 AM IST

ಸಾರಾಂಶ

ಬೆಂಗಳೂರು ಕೃಷಿ ವಿವಿ ಈ ಬಾರಿ ನ.13 ರಿಂದ ಆಯೋಜಿಸಿರುವ ಕೃಷಿ ಮೇಳದಲ್ಲಿ ಏಕ ರೀತಿಯ ಬೆಳೆಯಿಂದಾಗಿ ಉಂಟಾಗುವ ಮಣ್ಣಿನ ಫಲವತ್ತತೆ ನಾಶ, ರೋಗ ಮತ್ತು ಕೀಟ ಹಾವಳಿ ತಡೆಗಟ್ಟಲು ಬಯಸುವವರಿಗೆ ಸುಧಾರಿತ ಕರಬೂಜ ತಳಿಗಳು ಗಮನ ಸೆಳೆಯಲಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿವಿ ಈ ಬಾರಿ ನ.13 ರಿಂದ ಆಯೋಜಿಸಿರುವ ಕೃಷಿ ಮೇಳದಲ್ಲಿ ಏಕ ರೀತಿಯ ಬೆಳೆಯಿಂದಾಗಿ ಉಂಟಾಗುವ ಮಣ್ಣಿನ ಫಲವತ್ತತೆ ನಾಶ, ರೋಗ ಮತ್ತು ಕೀಟ ಹಾವಳಿ ತಡೆಗಟ್ಟಲು ಬಯಸುವವರಿಗೆ ಸುಧಾರಿತ ಕರಬೂಜ ತಳಿಗಳು ಗಮನ ಸೆಳೆಯಲಿವೆ.

ಪಾಲಿಹೌಸ್‌ನಲ್ಲಿ ಹಲವು ತಳಿಯ ಕರಬೂಜಗಳನ್ನು ಬೆಳೆದಿದ್ದು 70 ದಿನದಲ್ಲೇ ಕಟಾವಿಗೆ ಬರುವುದು ಇವುಗಳ ವಿಶೇಷವಾಗಿದೆ. ಒಂದೂವರೆ ಅಡಿಯ ಅಂತರದಲ್ಲೇ ಸಸಿ ಬೆಳೆಸಬಹುದಾಗಿದ್ದು ಒಂದು ಕರಬೂಜ ಒಂದೂವರೆಯಿಂದ ಎರಡೂವರೆ ಕೆಜಿ ತೂಗಲಿವೆ.

ಬೀಜ ಸರಬರಾಜು ಮಾಡುವ ಕಂಪನಿಯೇ ಕೆಜಿಗೆ 70 ರುಪಾಯಿಯಂತೆ ಖರೀದಿಸಲಿದ್ದು, ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಇದಕ್ಕಿಂತ ಹೆಚ್ಚಿನ ಬೆಲೆ ಪಡೆಯಬಹುದಾಗಿದೆ. ಮಧುಮತಿ, ರಮ್ಯಾ, ಗೋಲ್ಡೀ ಮತ್ತಿತರ ತಳಿಗಳ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದ್ದು ಬಾಳೆಯ ಮಾದರಿಯಲ್ಲಿ ಒಂದು ಗಿಡಕ್ಕೆ ಒಂದೇ ಕಾಯಿಯನ್ನು ಉಳಿಸಿಕೊಂಡರೆ ಹೆಚ್ಚು ತೂಕ ಬರಲಿದೆ.

ರೈತರಿಗೆ ಉತ್ತಮ ಆಯ್ಕೆ

ಈ ಬಗ್ಗೆ ಮಾಹಿತಿ ನೀಡಿದ ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ, ‘ರೈತರು ಟೊಮೆಟೋ, ಬದನೆ, ಕ್ಯಾಪ್ಸಿಕಂ ಮತ್ತಿತರ ಒಂದೇ ರೀತಿಯ ಬೆಳೆಗಳನ್ನು ಪುನರಾವರ್ತಿಸುತ್ತಾ ಬೆಳೆದರೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ರೋಗ-ಕೀಟಗಳ ಹಾವಳಿಯೂ ಅಧಿಕವಾಗುತ್ತದೆ. ಇದನ್ನು ನಿವಾರಿಸಲು ಅಲ್ಪಾವಧಿ ಬೆಳೆಯಾದ ಕರಬೂಜ ಉತ್ತಮ ಆಯ್ಕೆಯಾಗಿದೆ’ ಎಂದರು

ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ

ಅನ್ನದಾತರು ದಿನನಿತ್ಯ ಬಳಸುತ್ತಿದ್ದ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನಕ್ಕೆಂದೇ ಬಿದಿರಿನಲ್ಲಿ ಮನೆಯೊಂದನ್ನು ನಿರ್ಮಿಸಲಾಗಿದೆ. ಸೇರು, ಪಾವು, ಚಟಾಕಿ, ಬೀಸುವ ಕಲ್ಲು, ಒನಕೆ, ಮೊರ, ಮಡಿಕೆ, ಸಡ್ಡೆ, ಗೊಟ್ಟ, ಮಖರಿ, ಕಣಜ, ಬಿಲ್ಲು, ಈಳಿಗೆ ಮಣಿ ಮತ್ತಿತರ 50 ಕ್ಕೂ ಅಧಿಕ ವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಹೂವುಗಳ ಲೋಕದ ಅನಾವರಣ

ಹಲವು ವಿಧದ ಹೂವುಗಳು ನೋಡುಗರ ಮನಸ್ಸನ್ನು ಉಲ್ಲಾಸಗೊಳಿಸಲು ಸಜ್ಜಾಗಿವೆ. ಈ ಬಗ್ಗೆ ಮಾಹಿತಿ ನೀಡಿದ ಸೂರ್ಯಕಾಂತಿ ವಿಭಾಗದ ಮುಖ್ಯಸ್ಥೆ ಟಿ.ಕೆ.ನಾಗರತ್ನಾ, ವಿವಿಧ ಸಮಾರಂಭಗಳಿಗೆಅಲಂಕಾರಿಕ ಸೂರ್ಯಕಾಂತಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿತ್ತನೆಯಾದ 55 ದಿನಕ್ಕೇ ಹೂವುಗಳು ಪ್ರಾರಂಭವಾಗಲಿದ್ದು 90 ದಿನದವರೆಗೂ ಮುಂದುವರೆಯುತ್ತದೆ. ಐದಾರು ಬಣ್ಣಗಳ ಹೂವೂಗಳೂ ಬಿಡುವುದರಿಂದ ರೈತರು ಉತ್ತಮ ಆದಾಯ ಪಡೆಯಬಹುದು’ ಎಂದು ವಿವರಿಸಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ