ಕನ್ನಡಪ್ರಭ ವಾರ್ತೆ ಬ್ಯಾಡಗಿ
ದೇಶದ ಆರ್ಥಿಕ ಅಭಿವೃದ್ಧಿಗೆ ಕೃಷಿಯೇ ಮೂಲವಾಗಿದೆ. ಆದರೆ ಕೃಷಿಕನ ನಷ್ಟ ಮತ್ತು ಪರಿಹಾರ ಕುರಿತು ವೈಜ್ಞಾನಿಕ ಅಧ್ಯಯನ (ಅಗ್ರಿಕಲ್ಚರಲ್ ಲಾಸ್) ನಡೆಸಲು ಮುಂದಾಗದ ರಾಜಕೀಯ ಪಕ್ಷಗಳಿಗೆ ಧಿಕ್ಕಾರವಿರಲಿ. ಮನಸ್ಸಿಗೆ ಬಂದಂತೆ ಆಡಳಿತ ನಡೆಸಿದರೇ ಸುಮ್ಮನಿರಲು ಸಾಧ್ಯವಿಲ್ಲ, ಸಂಘಟನೆಗಳ ಮೂಲಕ ಕೃಷಿ ಮತ್ತು ಕೃಷಿಕರ ಅವಶ್ಯಕತೆ ಕುರಿತು ದೇಶದ ರಾಜಕಾರಣಿಗಳಿಗೆ ಮನವರಿಕೆ ಮಾಡದೇ ಬಿಡುವುದಿಲ್ಲ ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮದಿನದ ನಿಮಿತ್ತ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ತಪ್ಪು ನೀತಿಯಿಂದ ಶೇ.70ರಷ್ಟಿದ್ದ ಕೃಷಿಕರ ಸಂಖ್ಯೆ ಇಂದು 58ಕ್ಕಿಳಿದಿದೆ. ಬಹುತೇಕ ಜನರು ಕೃಷಿಯಿಂದ ವಿಮುಖವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಕೃಷಿ ಅಭಿವೃದ್ಧಿ ವಿಷಯ ಇಲ್ಲದೆಯೂ ಪ್ರಣಾಳಿಕೆ ಘೋಷಿಸುವ ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ ಇಂತಹ ವಿಷಯಗಳು ಮನವರಿಕೆ ಯಾಗಬೇಕು. ಸುಳ್ಳು ಭರವಸೆಗಳನ್ನು ಕೊಟ್ಟು ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬರುತ್ತಿದ್ದು, ಇಂತವರು ರೈತರಿಗೆ ಬೇಡವಾದ ಅವೈಜ್ಞಾನಿಕ ನೀತಿ ಘೋಷಿಸಿ ರೈತರನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.ಹಗಲಿರುಳೆನ್ನದೇ ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೊನೆಗೊಂದು ದಿವಸ ಬೀದಿಯಲ್ಲಿ ಸುರಿದು ಕಣ್ಣೀರು ಹಾಕುವ ರೈತನ ಸಂಕಷ್ಟವನ್ನು ಕೇಳೊರ‍್ಯಾರು, ಹಾಗಿದ್ದರೆ ಕೃಷಿಯು ಹಾದಿಯನ್ನು ತಪ್ಪಿದ್ದೆಲ್ಲಿ..? ಯಾವೊಬ್ಬ ತಜ್ಞನೂ ಈ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿಲ್ಲ, ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತ ನಾಡಿ, ದೇಶ ಕಾಯುವ ಯೋಧನಷ್ಟೇ ಜವಾಬ್ದಾರಿ ಮತ್ತು ಪ್ರಾಮುಖ್ಯತೆ ರೈತನಗಿದೆ. ದೇಶಕ್ಕಾಗಿ ಕೃಷಿಕರೂ ವರ್ಷವೀಡಿ ದುಡಿಯುತ್ತಿದ್ದಾರೆ, ಆದರೆ ಕೃಷಿಕನನ್ನು ಉದ್ಧರಿಸಲು ಇಲ್ಲಿಯವರೆಗೂ ಯಾವ ಮೀಸಲಾತಿ ನೀಡಿದ್ದೀರಿ ಎಂದು ಪ್ರಶ್ನಿಸಿ, ನಮ್ಮ ಬೇಡಿಕೆಗಳಿಗೆ ಸಂಘಗಳನ್ನು ಕಟ್ಟಿಕೊಂಡು ಸರ್ಕಾರದ ಜೊತೆ ಸಂಘರ್ಷ ನಡೆಸಬೇಕಾಗಿದೆ. ಅದಾಗ್ಯೂ ಸಾಲಮನ್ನಾ ಇತರ ಸೌಲಭ್ಯಗಳನ್ನು ಘೋಷಿಸಿ ನಮ್ಮನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪ್ರಸ್ತುತ ಸರ್ಕಾರಗಳು ಅಧಿಕಾರದ ಆಸೆಗಾಗಿ ಜಾತಿ, ಧರ್ಮಗಳ ಆಧಾರದ ಮೇಲೆ ಮೀಸಲಾತಿ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾವು 21ನೇ ಶತಮಾನದಲ್ಲಿದ್ದೇವೆ, ಮಂದಿನ ಶತಮಾನಕ್ಕೆ ಏನು ಅವಶ್ಯವಿದೆ ಎಂಬ ಚರ್ಚೆಗಳು ನಡೆಯದೇ ಜಾತಿಗಣತಿಯಂತಹ ಯಾರಿಗೂ ಬೇಡವಾದ ವಿಷಯಗಳು ದೇಶದೆಲ್ಲೆಡೆ ಚರ್ಚೆಯ ವಿಷಯವಾಗುತ್ತಿರುವುದು ವಿಷಾದಕರ ಸಂಗತಿ ಎಂದರು.
ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಶ್ರೀ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಅಡಿವೆಪ್ಪ ಆಲದಕಟ್ಟಿ, ಮಹಮ್ಮದ ಗೌಸ್ ಪಾಟೀಲ್, ಬಸನಗೌಡ ಗಂಗಪ್ಪಗೌಡ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಮೌನೇಶ ಕಮ್ಮಾರ, ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ರುದ್ರಗೌಡ್ರ ಕಾಡನಗೌಡ್ರ, ಜಾನ್ ಪುನೀತ್, ಮಂಜು ತೋಟದ, ಮಲ್ಲೇಶಪ್ಪ ಡಂಬಳ, ಶಂಕರ ಮರಗಲ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ರೈತ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ರೈತರು ಭಾಗವಹಿಸಿದ್ದರು. ಇತ್ತೀಚೆಗೆ ಕೊಲಂಬಿಯಾ ದೇಶದಿಂದ ತಾಯ್ನಾಡಿಗೆ ಮರಳಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.