ಒಂದೂವರೆ ತಿಂಗಳಾದ್ರೂ ಭದ್ರಾ ನೀರು ತಲುಪದೇ ಕೃಷಿಗೆ ಹಿನ್ನಡೆ

KannadaprabhaNewsNetwork |  
Published : Mar 25, 2025, 12:51 AM IST
ಮಲೇಬೆನ್ನೂರಲ್ಲಿ ರೈತರ ಧರಣಿ ಸತ್ಯಾಗ್ರಹ | Kannada Prabha

ಸಾರಾಂಶ

ಭದ್ರಾ ನಾಲೆಯಲ್ಲಿ ನೀರುಹರಿಸಿ, ಒಂದೂವರೆ ತಿಂಗಳಾಗಿದೆ. ಆದರೆ, ಕೊನೆ ಭಾಗದ ಗಂಗನರಸಿ, ಗುತ್ತೂರು, ಮಂಡಲೂರು, ಅಗಸನಕಟ್ಟೆ, ಸಿದ್ದಾಪುರ ಮತ್ತು ಕೋಡಿಹಳ್ಳಿ ಗ್ರಾಮಗಳ ನೂರಾರು ರೈತರ, ದೇವರಬೆಳಕೆರೆ ಪಿಕಪ್ ವ್ಯಾಪ್ತಿಯ ಜಮೀನುಗಳಿಗೆ ಇದುವರೆಗೂ ನೀರು ತಲುಪಿಲ್ಲ ಎಂದು ಆರೋಪಿಸಿ ದಾವಣಗೆರೆ ತಾಲೂಕಿನ ನೂರಾರು ರೈತರು ಮಲೇಬೆನ್ನೂರಿನ ನೀರಾವರಿ ಇಲಾಖೆ ಕಚೇರಿ ಎದುರು ಸೋಮವಾರ ಶಾಮಿಯಾನ ಹಾಗೂ ಮುಖಂಡ ಎಂ.ಜಿ. ನಂಜುಂಡ ಸ್ವಾಮಿ ಭಾವಚಿತ್ರದೊಂದಿಗೆ ಧರಣಿ ನಡೆಸಿದ್ದಾರೆ.

- ದಾವಣಗೆರೆ ತಾಲೂಕು ರೈತರ ಆರೋಪ । ಮಲೇಬೆನ್ನೂರಿನ ನೀರಾವರಿ ಕಚೇರಿ ಎದುರು ಪ್ರತಿಭಟನೆ

- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಭದ್ರಾ ನಾಲೆಯಲ್ಲಿ ನೀರುಹರಿಸಿ, ಒಂದೂವರೆ ತಿಂಗಳಾಗಿದೆ. ಆದರೆ, ಕೊನೆ ಭಾಗದ ಗಂಗನರಸಿ, ಗುತ್ತೂರು, ಮಂಡಲೂರು, ಅಗಸನಕಟ್ಟೆ, ಸಿದ್ದಾಪುರ ಮತ್ತು ಕೋಡಿಹಳ್ಳಿ ಗ್ರಾಮಗಳ ನೂರಾರು ರೈತರ, ದೇವರಬೆಳಕೆರೆ ಪಿಕಪ್ ವ್ಯಾಪ್ತಿಯ ಜಮೀನುಗಳಿಗೆ ಇದುವರೆಗೂ ನೀರು ತಲುಪಿಲ್ಲ ಎಂದು ಆರೋಪಿಸಿ ದಾವಣಗೆರೆ ತಾಲೂಕಿನ ನೂರಾರು ರೈತರು ಮಲೇಬೆನ್ನೂರಿನ ನೀರಾವರಿ ಇಲಾಖೆ ಕಚೇರಿ ಎದುರು ಸೋಮವಾರ ಶಾಮಿಯಾನ ಹಾಗೂ ಮುಖಂಡ ಎಂ.ಜಿ. ನಂಜುಂಡ ಸ್ವಾಮಿ ಭಾವಚಿತ್ರದೊಂದಿಗೆ ಧರಣಿ ನಡೆಸಿದರು.

ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಮಾತನಾಡಿ, ಮೇಲ್ಭಾಗದ ರೈತರು ನಾಲೆಯಲ್ಲಿ ಹಾಕಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು, ನಾಲೆಗಳ ದುರಸ್ತಿಗೊಳಿಸಲು ಆಗ್ರಹಿಸಿ ಮಾ.೫ರಂದು ಜಿಲ್ಲಾಧಿಕಾರಿ, ಜಿಲ್ಲಾ ಸಚಿವರು ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ತಹಸೀಲ್ದಾರ್ ನಾಲೆ ದುರಸ್ತಿ ಭರವಸೆ ನೀಡಿದ್ದ ಮೇರೆಗೆ ಧರಣಿ ವಾಪಾಸ್ ಪಡೆದಿದ್ದೆವು. ಆದರೆ, ಈವರೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ೬೦ ಕಿಮೀ ದೂರದಿಂದ ವಾಹನಗಳಲ್ಲಿ ಆಗಮಿಸಿ, ಧರಣಿ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಮಹಿಳಾ ಮುಖಂಡೆ ವೀರಮ್ಮ ಮಾತನಾಡಿ, ಮಳೆಗಾಲದ ಬೆಳೆ ಬಿಟ್ಟರೆ ಸತತ ನಾಲ್ಕು ವರ್ಷಗಳು ನಾವು ಯಾವುದೇ ಬೆಳೆಯನ್ನು ಬೆಳೆದಿಲ್ಲ. ಜಮೀನು ಬರಡು ಭೂಮಿಯಾಗಿದೆ. ನಾಲೆಗಳಲ್ಲಿ ಕಸ, ಗಾಜು, ಚಪ್ಪಲಿ, ಬಟ್ಟೆ, ಗಿಡ-ಮರಗಳು ಬೆಳೆದು ನೀರು ಸರಿಯಾಗಿ ಹರಿಯುತ್ತಿಲ್ಲ. ನೀರಗಂಟಿಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಬೆಳೆಯಿಲ್ಲದೇ ಸರ್ಕಾರದ ಸೌಲಭ್ಯಗಳೇ ರೈತಿಗೆ ಸಿಗುತ್ತಿಲ್ಲ ಎಂದು ದೂರಿದರು.

ರೈತರಾದ ನಾಗರಾಜ್, ಶಿವಕುಮಾರ್, ಯಲ್ಲಮ್ಮ, ವೀರಮ್ಮ, ಬಂದಮ್ಮ, ಬಸವರಾಜ್, ವೀರೆಶ್, ವಿರೂಪಾಕ್ಷಪ್ಪ, ಈಶ್ವರಪ್ಪ ಹಾಗೂ ಎಇಇ ಕೃಷ್ಣಮೂರ್ತಿ ಮತ್ತಿತರು ಇದ್ದರು. ವೃತ್ತ ನಿರೀಕ್ಷಕ ಸುರೇಶ್ ಸಗರಿ, ಪಿಎಸ್‌ಐ ಪ್ರಭು, ಗುಪ್ತಚರ ವಿಭಾಗದ ಉಪಾಧೀಕ್ಷಕ ವಿಕಾಸ್ ರಂಜನ್ ಬಂದೋಬಸ್ತ್ ಒದಗಿಸಿದ್ದರು.

- - -

ಕೋಟ್‌ ದೇವರಬೆಳಕೆರೆ ಪಿಕಪ್‌ನಿಂದ ಒಟ್ಟು ೪೨೮೨ ಹೆಕ್ಟೇರ್ ಜಮೀನು ಇದ್ದು, ಬೇಸಿಗೆಯಲ್ಲಿ ಬನ್ನಿಕೋಡುವರೆಗೆ ಮಾತ್ರ ನೀರು ಹರಿಸಬಹುದು. ೨೦೨೧, ೨೦೨೨, ೨೦೨೩. ೨೦೨೪ರಿಂದಲೂ ₹2 ಕೋಟಿ ಅನುದಾನ ಒದಗಿಸಲು ನಿಗಮದ ಎಂ.ಡಿ.ಯವರಿಗೆ ಪತ್ರ ಬರೆಯಲಾಗಿದೆ

- ಧನಂಜಯ್, ಎಇಇ, ನೀರಾವರಿ ನಿಗಮ

- - - -೨೪ಎಂಬಿಆರ್೧: ನೀರು ಅಲಭ್ಯತೆ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮಲೇಬೆನ್ನೂರಲ್ಲಿ ದಾವಣಗೆರೆ ತಾಲೂಕಿನ ರೈತರು ಸೋಮವಾರ ಧರಣಿ ನಡೆಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...