ಬಳ್ಳಾರಿಯಲ್ಲಿ ₹20 ಕೋಟಿ ವೆಚ್ಚದಲ್ಲಿ ಅಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್

KannadaprabhaNewsNetwork | Updated : Jan 11 2024, 03:10 PM IST

ಸಾರಾಂಶ

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಖರೀದಿದಾರರ ಮತ್ತು ಮಾರಾಟಗಾರರ ಸಹಕಾರ ಅಗತ್ಯವಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ಕೆಎಂಇಆರ್‌ಸಿ ಅನುದಾನದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ ಬಳ್ಳಾರಿ ಅಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್(ಬಿಎಪಿಸಿ) ನಿರ್ಮಾಣಕ್ಕೆ ರಾಜ್ಯ ಗಣಿ- ಪರಿಸರ ಪುನಶ್ಚೇತನ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.

ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ, ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಸಾಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಳ್ಳಾರಿ ಜಿಲ್ಲೆಯು ಮೆಣಸಿನಕಾಯಿ ಬೆಳೆಗೆ ಹೆಸರುವಾಸಿಯಾಗಿದೆ. ನಮ್ಮ ಭಾಗದ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದ ಬಿಎಪಿಸಿ(ಬಳ್ಳಾರಿ ಅಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್) ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಖರೀದಿದಾರರ ಮತ್ತು ಮಾರಾಟಗಾರರ ಸಹಕಾರ ಅಗತ್ಯವಿದೆ ಎಂದರು.

ಕೇರಳದ ಕೊಚ್ಚಿನ್‍ನ ಭಾರತೀಯ ಸಾಂಬಾರು ಮಂಡಳಿ(ಅಭಿವೃದ್ಧಿ) ನಿರ್ದೇಶಕ ಧರ್ಮೇಂಧರ ದಾಸ್ ಮಾತನಾಡಿ, ಕರ್ನಾಟಕ ರಾಜ್ಯವು ಮಸಾಲೆ ಪದಾರ್ಥಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ದೇಶದಲ್ಲಿ ಕರ್ನಾಟಕ ರಾಜ್ಯವು ಮೆಣಸಿನಕಾಯಿ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಭಾರತದ ಮಸಾಲೆ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ ಎಂದರು.

ಭಾರತೀಯ ಸಾಂಬಾರು ಮಂಡಳಿಯು ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಮತ್ತು ಅವರ ಕೃಷಿ ಉತ್ಪನ್ನಗಳ ಗರಿಷ್ಠ ಬೆಲೆಯನ್ನು ಪಡೆಯಲು ಖರೀದಿದಾರರೊಂದಿಗೆ ನೇರವಾಗಿ ವ್ಯಾಪಾರ ಸಂಪರ್ಕವನ್ನು ರಚಿಸುವ ಮೂಲಕ ರಫ್ತುಗಳನ್ನು ಬೆಂಬಲಿಸಲು ಸಾಮಾನ್ಯ ವೇದಿಕೆಯನ್ನೂ ಕಲ್ಪಿಸುತ್ತಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎನ್.ಎಂ. ಯಶವಂತ್ ರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹೊರತಂದ “ಮೆಣಸಿನಕಾಯಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು” ಎಂಬ ಕಿರುಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

ನಂತರದಲ್ಲಿ ಸಾಂಬಾರು ಪದಾರ್ಥಗಳ ಖರೀದಿದಾರ ಮತ್ತು ಮಾರಾಟಗಾರರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ನಾನಾ ತಳಿಗಳ ಮೆಣಸಿನಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಯ ಪದಾರ್ಥಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.

ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಘವೇಂದ್ರ ಆಚಾರಿ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ಜಿ. ಯಾದವ್, ಭಾರತೀಯ ಸಂಬಾರು ಮಂಡಳಿಯ(ಮಾರುಕಟ್ಟೆ) ಉಪನಿರ್ದೇಶಕ ಎಂ. ಮಣಿಕಂದನ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇಲಾಖೆಯ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್‌ನ ಉಪನಿರ್ದೇಶಕ ಎಸ್.ವಿ. ಮನಸೂರ, ಸಕಲೇಶಪುರ ಭಾರತೀಯ ಸಾಂಬಾರು ಮಂಡಳಿಯ ಉಪನಿರ್ದೇಶಕ ಎಂ.ವೈ. ಹೊನ್ನೂರ, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ್ 

ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸಿದ್ಧರಾಮಯ್ಯ ಎಂ. ಬರಗಿಮಠ, ಜಿಪಂ ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ಕೃಷಿ ಇಲಾಖೆಯ ಉಪನಿರ್ದೇಶಕ ಡಾ. ಎನ್. ಕೆಂಗೇಗೌಡ, ಜಿಲ್ಲಾ ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಸೇರಿದಂತೆ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Share this article